ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತಸಂಘ ಚಾಮರಾಜನಗರದಲ್ಲಿ ಪ್ರತಿಭಟನೆ

| Published : Jul 11 2024, 01:35 AM IST

ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತಸಂಘ ಚಾಮರಾಜನಗರದಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತಸಂಘ ಚಾಮರಾಜನಗರ ಜಿಲ್ಲಾ ಘಟಕದಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಚಾಮರಾಜನಗರ ಜಿಲ್ಲಾಡಳಿತ ಭವನದ ಆವರಣಕ್ಕೆ ತೆರಳಿ ರೈತರು ಅಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರೈತರ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತಸಂಘ ಚಾಮರಾಜನಗರ ಜಿಲ್ಲಾ ಘಟಕದಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗ ಸಮಾವೇಶಗೊಂಡ ರೈತರು ಅಲ್ಲಿಂದ ಮೆರವಣಿಗೆಯಲ್ಲಿ ಹೊರಟ ಸಮಿತಿ ಪದಾಧಿಕಾರಿಗಳು ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದ ಆವರಣಕ್ಕೆ ತೆರಳಿ ಅಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ನಗರದ ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯದ ಮನವಿ ಪತ್ರ ಸಲ್ಲಿಸಿದರು.ಪ್ರಸ್ತುತ ರೈತರು ಕೃಷಿ ಉದ್ದೇಶಕ್ಕೆ ವಿದ್ಯುತ್ ಸಂಪರ್ಕ ಪಡೆಯಲು 2 ರಿಂದ 3 ಲಕ್ಷ ರು. ಖರ್ಚು ಆಗುತ್ತಿದ್ದು ಅಷ್ಟೊಂದು ದೊಡ್ಡ ಮೊತ್ತ ಕೊಟ್ಟು ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಹಿಂದೆ ಇದ್ದಂತೆ ಪ್ರತಿ ಹೆಚ್.ಪಿ. ಗೆ ನಿಗದಿತ ಮೊತ್ತ ಪಡೆದು ವಿದ್ಯುತ್ ಸಂಪರ್ಕ ನೀಡಬೇಕು ಎಂದರು.

ರೈತರು ಬೆಳೆದ ಎಲ್ಲಾ ಬೆಳೆಗಳನ್ನು ಎಂ.ಎಸ್.ಪಿ. ದರದಲ್ಲಿ ಖರೀದಿಸಲು ಪ್ರತಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ತೆರೆಯಬೇಕು. ರೈತರ ಎಲ್ಲಾ ಬೆಳೆಗಳಿಗೂ ಪ್ರಧಾನ ಮಂತ್ರಿ ಫಸಲು ಭಿಮಾ ಯೋಜನೆಯನ್ನು ವಿಸ್ತರಿಸಿ ಗ್ರಾಮ ಮಟ್ಟದಲ್ಲಿ ಬೆಳೆ ಹಾನಿ ನಿರ್ಧರಿಸಬೇಕು ಎಂದರು. ಕಾಡು ಪ್ರಾಣಿಗಳಿಂದ ಹಾಳಾದ ಆಸ್ತಿ ಪ್ರಾಣ ಹಾನಿ, ಬೆಳೆಗಳಿಗೆ ವೈಜ್ಞಾನಿಕವಾಗಿ ನಷ್ಟವನ್ನು ಭರಿಸಬೇಕು ಮತ್ತು ರೈತರ ಜಮೀನಿನಲ್ಲಿ ಬೆಳೆಯುವ ಸಾಗುವಾನಿ ಮರಗಳ ಕಡಿತಲೆ ಮತ್ತು ಸಾಗಣೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಬೇಕು ಎಂದರು.ರೈತರು ಪಡೆದಿರುವ ಕೃಷಿ ಸಾಲಕ್ಕೆ ಎಲ್ಲಾ ಬ್ಯಾಂಕ್ ನವರು ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಬರ ಇರುವುದರಿಂದ ರೈತರ ಎಲ್ಲಾ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದರು. ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸುಮಾರು 30ರಿಂದ 40 ವರ್ಷಗಳಿಂದಲೂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಿ ಶೀಘ್ರದಲ್ಲಿ ಪೋಡಿ ದುರಸ್ತಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ರಾಜ್ಯ ರೈತಸಂಘ ಉಪಾಧ್ಯಕ್ಷ ಎ.ಎಂ.ಮಹೇಶ್ ಪ್ರಭು, ಚಾಮರಾಜನಗರ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಪುರ ಮಹಾದೇವಪ್ಪ, ಹೆಬ್ವಸೂರುಬಸವಣ್ಣ, ಜ್ಯೋತಿಗೌಡನಪುರ ಸಿದ್ದರಾಜು, ಹೆಗ್ಗವಾಡಿಪುರಮಹೇಶ್ ಕುಮಾರ್, ಮರಿಯಾಲಮಹೇಶ್, ಮೂಡ್ನಾಕೂಡು ಮಹೇಶ್, ರೈತಸಂಘ ಯುವಘಟಕದ ಅಧ್ಯಕ್ಷ ಯಶವಂತ್ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.