ಧಾರವಾಡ:
ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಧಾರವಾಡದಲ್ಲಿ ಆಟೋ ಎಲ್‌ಪಿಜಿಗೆ ತೀವ್ರ ಹಾಹಾಕಾರ ಶುರುವಾಗಿದ್ದು, ಗುರುವಾರ ಆಟೋ ಚಾಲಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಸಹ ನಡೆಸಿದರು.ಪೆಟ್ರೋಲ್ ಮೂಲಕ ಆಟೋ ಓಡಿಸಲು ಸಾಧ್ಯವಾಗದೇ ಎಲ್‌ಪಿಜಿ ಸೌಲಭ್ಯವುಳ್ಳ ಆಟೋ ಖರೀದಿಸಿದ್ದೇವೆ. ಇದೀಗ ಎಲ್‌ಪಿಜಿ ಸಹ ಸಿಗುತ್ತಿಲ್ಲ. ಇರುವ ಕೆಲವೇ ಆಟೋ ಎಲ್‌ಪಿಜಿ ಕೇಂದ್ರಗಳಲ್ಲಿ ದರವನ್ನು ಲೀಟರ್‌ಗೆ ಸುಮಾರು ₹ 10ರಿಂದ ₹ 15ರ ವರೆಗೆ ಏರಿಸಲಾಗಿದೆ. ಬಾಡಿಗೆ ಹೊಡೆಯಲು ಅಲ್ಲದೇ ನಿತ್ಯ ಶಾಲೆಗಳಿಗೆ ಮಕ್ಕಳನ್ನು ಸಹ ಬಿಟ್ಟು ಬರಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಐದು ಎಲ್‌ಪಿಜಿ ಪಂಪ್‌ಗಳಿದ್ದು ಎಲ್ಲೂ ಸಮರ್ಪಕವಾಗಿ ಎಲ್‌ಪಿಜಿ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 15 ದಿನಗಳಿಂದ ಈ ಸಮಸ್ಯೆ ಆಗುತ್ತಿದ್ದು, 2500 ಎಲ್‌ಪಿಜಿ ಆಟೋ ಹಾಗೂ ಅವರ ಕುಟುಂಬದರು ಸಂಕಷ್ಟದಲ್ಲಿದ್ದಾರೆ. ಆದಷ್ಟು ಶೀಘ್ರ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಇಲ್ಲದೇ ಹೋದಲ್ಲಿ ಮತ್ತೆ ಉಗ್ರ ರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಆಟೋ ಚಾಲಕರು ಎಚ್ಚರಿಸಿದರು.