ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಉಡುತೊರೆ ಹಳ್ಳ ಜಲಾಶಯದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕಿನ ಸಮೀಪದ ಅಜ್ಜಿಪುರ ನೀರಾವರಿ ಇಲಾಖೆ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡ ಮಾತನಾಡಿ, ಕೋಟ್ಯಂತರ ರು.ವೆಚ್ಚ ಮಾಡಿ ಸರ್ಕಾರ ಹಲವಾರು ವರ್ಷಗಳ ಹಿಂದೆ ಉತ್ತಮವಾದ ಉಡುತೊರೆ ಹಳ್ಳಕ್ಕೆ ಜಲಾಶಯ ನಿರ್ಮಾಣ ಮಾಡಿ ಅದಕ್ಕೆ ಎಡ ಮತ್ತು ಬಲದಂಡೆ ನಾಲೆಗಳನ್ನು ನಿರ್ಮಾಣ ಮಾಡಿದೆ. ಆದರೆ ರೈತರಿಗೆ ಜಲಶಾಯದಲ್ಲಿ ನೀರಿದ್ದರೂ ನೀರಾವರಿ ಯೋಜನೆಯ ಫಲಪ್ರದಗೊಳಿಸಲು ಸಂಬಂಧಪಟ್ಟ ನೀರಾವರಿ ಅಧಿಕಾರಿಗಳು ವಿಫಲರಾಗಿದ್ದಾರೆ. ಹೀಗಾಗಿ ಈ ಭಾಗದ ರೈತರಿಗೆ ನಾಲೆಗಳು ಮತ್ತೆ ಕಾಲುವೆಗಳನ್ನು ದುರಸ್ತಿಪಡಿಸಿ ಅದರಲ್ಲಿರುವ ರಾಡಿ ಮತ್ತು ಗಿಡ ಗಂಟಿಗಳನ್ನು ತೆರವುಗೊಳಿಸಿ, ರೈತರಿಗೆ ನೀರಾವರಿ ಯೋಜನೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ಈ ಭಾಗದಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮಾಡಿರುವ ನೀರಾವರಿ ಯೋಜನೆ ಇಲ್ಲದಿದ್ದಾಗಿದೆ. ಹೀಗಾಗಿ ಸಂಬಂಧಪಟ್ಟ ಜನ ಪ್ರತಿನಿಧಿ ಅಧಿಕಾರಿಗಳಿಗೆ ಹಲವಾರು ಬಾರಿ ನೀರಾವರಿ ಯೋಜನೆ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಇದುವರೆಗೆ ಕ್ರಮಕೈಗೊಳ್ಳದೆ ಇರುವುದರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮುಂದಾದರೂ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ರೈತರಿಗೆ ನೀರಾವರಿ ಯೋಜನೆ ಸದ್ಭಳಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕಾವೇರಿ ನೀರಾವರಿ ಇಲಾಖೆ ಎಂಜಿನಿಯರ್ ರಮೇಶ್ ಮಾತನಾಡಿ, ಈಗಾಗಲೇ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾಲುವೆಗಳನ್ನು ದುರಸ್ತಿ ಪಡಿಸಲಾಗುತ್ತಿದೆ. ಜೊತೆಗೆ ಅನುದಾನದ ಕೊರತೆ ಇರುವುದರಿಂದ ನಾಲಗಳನ್ನು ದುರಸ್ತಿಗೊಳಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಮತ್ತು ವಿವಿಧ ಗ್ರಾಮಗಳಲ್ಲಿರುವ ಕೆರೆಕಟ್ಟೆಗಳಿಗೆ ನೀರು ಕಾಲುವೆ ಮುಖಾಂತರ ಬಿಡಲು ಕ್ರಮ ಕೈಗೊಳ್ಳಲಾಗುವುದು. ಈಗ ಬಿಡುತ್ತಿರುವ ನೀರು ಯಾವ ಗ್ರಾಮಕ್ಕೆ ಹೋಗುತ್ತಿವೆ ಯಾವ ಗ್ರಾಮಕ್ಕೆ ಹೋಗುವುದಿಲ್ಲ ಎಂಬುದನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಜಿಲ್ಲಾ ಸಂಘಟನಾ ಕಾರ್ಯಾಧ್ಯಕ್ಷ ಸೈಲೆಂದರ್ ಕೊಳ್ಳೇಗಾಲ ತಾಲೂಕು ಕಾರ್ಯದರ್ಶಿ ರವಿನಾಯ್ಡು ಹನೂರು ತಾಲೂಕು ಘಟಕದ ರಾಜಣ್ಣ ಪುಂಗುಡಿ ವಿವಿಧ ಗ್ರಾಮಗಳಿಂದ ಬಂದಿದ್ದ ರೈತ ಮುಖಂಡರು ಉಪಸ್ಥಿತರಿದ್ದರು. ರಾಮಪುರ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.