ಮೂಲಸೌಕರ್ಯಕ್ಕಾಗಿ ಮೇ 26ರಂದು ಬಳ್ಳಾರಿ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ

| Published : May 24 2025, 12:13 AM IST

ಮೂಲಸೌಕರ್ಯಕ್ಕಾಗಿ ಮೇ 26ರಂದು ಬಳ್ಳಾರಿ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ನಗರ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಮೇ 26ರಂದು ಬೆಳಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಸಂಚಾಲಕ ಆರ್. ಸೋಮಶೇಖರಗೌಡ ತಿಳಿಸಿದರು.

ಬಳ್ಳಾರಿ: ನಗರ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಮೇ 26ರಂದು ಬೆಳಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಸಂಚಾಲಕ ಆರ್. ಸೋಮಶೇಖರಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಹೊರಚರಂಡಿ ವ್ಯವಸ್ಥೆ ಕಾಲಕಾಲಕ್ಕೆ ನಿರ್ವಹಣೆ ಇಲ್ಲದೆ ಸಂಪೂರ್ಣ ಹದಗೆಟ್ಟು ಹೋಗಿದೆ. ಅನೇಕ ಸ್ಥಳಗಳಲ್ಲಿ ಆಗಾಗ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗಿ ಬರುತ್ತದೆ. ಇದರಿಂದ ನಾನಾ ಕಾಯಿಲೆ ಬರುವ ಭೀತಿ ಎದುರಾಗಿದೆ. ಯಾವತ್ತೋ ಆಗಬೇಕಾಗಿದ್ದ ವರ್ತುಲ ರಸ್ತೆ (ರಿಂಗ್ ರೋಡ್) ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ನಗರದಲ್ಲಿ ಕಾರುಗಳ ಹಾಗೂ ದ್ವಿಚಕ್ರ ವಾಹನಗಳ ಮತ್ತು ಇತರ ವಾಹನಗಳ ಸಂಖ್ಯೆ ಅನೇಕ ಪಟ್ಟು ಹೆಚ್ಚಿದೆ. ಸಾವಿರಾರು ಭಾರಿ ವಾಹನಗಳು (ಲಾರಿಗಳು) ನಗರದ ಮುಖಾಂತರ ಚಲಿಸುವುದರಿಂದ ಸಾರ್ವಜನಿಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ಬಳ್ಳಾರಿ ನಗರದಲ್ಲಿಯೂ ಮುಖ್ಯ ಮತ್ತು ಅಡ್ಡ ರಸ್ತೆಗಳು ಕಳಪೆಮಟ್ಟದ ಕಾಮಗಾರಿಯಿಂದ ಹಾಳಾಗಿವೆ. ಅನೇಕ ರಸ್ತೆಗಳ ತುಂಬಾ ಕುಣಿಗಳು ಬಿದ್ದಿವೆ. ಅವೈಜ್ಞಾನಿಕ ವೇಗ ತಡೆಗಳ ಪರಿಣಾಮವಾಗಿ, ವಾಹನ ಚಾಲಕರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಹೇಳಿದರು.

ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ₹7 ಕೋಟಿ ಖರ್ಚು ಮಾಡಿ ಟವರ್ ನಿರ್ಮಿಸಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗಲಿದ್ದು, ಸರ್ಕಾರದ ಹಣ ಪೋಲಾಗುತ್ತಿದೆ. ನಗರದಲ್ಲಿ 24/7 ಕುಡಿಯುವ ನೀರಿನ ಯೋಜನೆಗೆ ₹160 ಕೋಟಿಗಿಂತಲೂ ಅಧಿಕ ಹಣ ವೆಚ್ಚ ಮಾಡಲಾಗಿದೆ. ಈ ಯೋಜನೆ ಕೈಗೊಂಡು ದಶಕ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆ ಸಂಪೂರ್ಣ ವಿಫಲವಾಗಿದ್ದು, ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಆಡಳಿತ ವ್ಯವಸ್ಥೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು.

ನಗರಾದ್ಯಂತ ಬೀದಿನಾಯಿಗಳು, ಬಿಡಾಡಿ ದನಗಳು, ಅಪಘಾತಕ್ಕೆ ಕಾರಣವಾಗಿವೆ. ಅನೇಕರು ಅಪಘಾತಕ್ಕೀಡಾಗಿ ಬಲಿಪಶುಗಳಾಗಿದ್ದಾರೆ. ಇದಕ್ಕೆ ಹತ್ತಾರು ಬಾರಿ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ನಗರದಲ್ಲಿ ಅಸುರಕ್ಷಿತ ಹಾಗೂ ಅನಾರೋಗ್ಯಕರ ವಾತಾವರಣ ಆವರಿಸಿದ್ದು, ಆದ್ಯತೆ ಮೇರೆಗೆ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ನಗರವನ್ನು ಬಾಧಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಮುಖವಾಗಿ ಪಾಲಿಕೆ ಆಡಳಿತ ನಗರದ ಜನರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ನೀಡುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿ ಹೋರಾಟ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹೋರಾಟ ಸಮಿತಿಯ ಸಲಹೆಗಾರ ನರಸಣ್ಣ, ಮುರ್ತುಜಾ ಸಾಬ್, ಸಮಿತಿ ಸದಸ್ಯರಾದ ಗುರುರಾಜ್, ಡಾ. ಪ್ರಮೋದ್, ಶಾಂತಾ, ನಾಗರತ್ನಾ, ಸುರೇಶ್, ಅಂತೋನಿ, ವಿದ್ಯಾ ಸುದ್ದಿಗೋಷ್ಠಿಯಲ್ಲಿದ್ದರು.