ಸಾರಾಂಶ
ಬಿಜೆಪಿಯ ಶಾಸಕರೇ ಹೆಚ್ಚಿದ್ದಾರೆ ಎನ್ನುವ ಕಾರಣಕ್ಕೆ ನಿರ್ಲಕ್ಷ್ಯ: ಆರೋಪ
ಕನ್ನಡಪ್ರಭ ವಾರ್ತೆ ಉಡುಪಿಕರಾವಳಿಯ ಮೂರು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಬಿಡಿಗಾಸು ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ಮುಂದಿನ 10 ದಿನದೊಳಗೆ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡದೇ ಇದ್ದಲ್ಲಿ ಕರಾವಳಿಯ ಮೂರು ಜಿಲ್ಲೆಯ ಬಿಜೆಪಿಯ ಶಾಸಕರು ಸಿಎಂ ಮನೆ ಮುಂದೆ ಧರಣಿ ಕೂರುತ್ತೇವೆ ಎಂದು ಉಡುಪಿ ಜಿಲ್ಲೆಯ ಎಲ್ಲ 5 ಮಂದಿ ಬಿಜೆಪಿ ಶಾಸಕರು ಜಂಟಿಯಾಗಿ ಎಚ್ಚರಿಕೆ ನೀಡಿದ್ದಾರೆ.ಬಿಜೆಪಿ ಶಾಸಕರು ಸೋಮವಾರ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ನೇತೃತ್ವದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬಿಜೆಪಿಯ ಶಾಸಕರೇ ಹೆಚ್ಚಿದ್ದಾರೆ ಎನ್ನುವ ಕಾರಣಕ್ಕೆ ಈ ಜಿಲ್ಲೆಗಳನ್ನು ಸಿದ್ದರಾಮಯ್ಯ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಕಳೆದ ವರ್ಷ ಜಿಲ್ಲೆಗೆ ಆಗಮಿಸಿ ತ್ರೈಮಾಸಿಕ ಸಭೆ ನಡೆಸಿದ ಸಿಎಂ, ಆ ಸಭೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಲುಸಂಕ ನಿರ್ಮಾಣಕ್ಕೆ 50 ಕೋಟಿ ರು. ಅನುದಾನ ನೀಡುವುದಾಗಿ ಘೋಷಿಸಿದ್ದರು. ಆದರೆ ಇದುವರೆಗೆ ಒಂದು ರು. ಬಿಡುಗಡೆಯಾಗಿಲ್ಲ. ಸ್ವತಃ ಸಿಎಂ ನಡೆಸಿದ ಸಭೆಯಲ್ಲಿ ಕೈಗೊಂಡ ನಿರ್ಣಯಗಳಲ್ಲಿ ಯಾವುದೂ ಅನುಷ್ಠಾನಗೊಂಡಿಲ್ಲ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.
ಈ ವರ್ಷದ ಮಳೆಗೆ ಉಡುಪಿ ಜಿಲ್ಲೆಯಲ್ಲಿ 240 ಕೋಟಿ ರು.ಗೂ ಅಧಿಕ ಹಾನಿಯಾಗಿದೆ ಎಂದು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ. ಆದರೂ ಹಣ ಬಿಡುಗಡೆಯಾಗಿಲ್ಲ. ಹೊಸ ಯೋಜನೆ, ಕಾಮಗಾರಿಗಳಿಗೆ ತಾವು ಹಣ ಕೇಳುತ್ತಿಲ್ಲ, ಕೆಟ್ಟಿರುವ ರಸ್ತೆ ದುರಸ್ತಿಗೆ, ಕಡಲ್ಕೊರೆತ ತಡೆಗೆ ತುರ್ತು ಅನುದಾನ ಬಿಡುಗಡೆ ಮಾಡಿ ಎಂದಷ್ಟೇ ಕೇಳುತ್ತಿದ್ದೇವೆ. ಅದನ್ನೂ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮುಂದಿನ 10 ದಿನಗಳೊಳಗೆ ಕರಾವಳಿಯ ಪ್ರತಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಇದಕ್ಕೆ ಸಿಎಂ ಸ್ಪಂದಿಸದಿದ್ದಲ್ಲಿ ಕರಾವಳಿಯಲ್ಲಿ ಜನಾಂದೋಲನ ಆರಂಭವಾಗುತ್ತದೆ ಎಂದವರು ಎಚ್ಚರಿಕೆ ನೀಡಿದರು.ಬಡವರ ಹಕ್ಕು ಕಸಿಯುವ ಹುನ್ನಾರ:
ಬಿಪಿಎಲ್ ರೇಷನ್ ಕಾರ್ಡ್ ರದ್ದುಗೊಳಿಸಿ, ಜನರ ಹಕ್ಕುಗಳನ್ನು ಕಸಿಯುವ ಹುನ್ನಾರವನ್ನು ಸರ್ಕಾರ ನಡೆಸುತ್ತಿದೆ. ರಾಜ್ಯದಲ್ಲಿ 11 ಲಕ್ಷ ಬಿಪಿಎಲ್ ಕಾರ್ಡ್ ಹಾಗೂ ಜಿಲ್ಲೆಯಲ್ಲಿ 40 ಸಾವಿರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದರ ವಿರುದ್ಧ ವಿಧಾನಸಭಾವಾರು ಪ್ರತಿಭಟನೆ ಮಾಡಲು ಬಿಜೆಪಿ ಯೋಜನೆ ರೂಪಿಸಿದೆ. ಸುತ್ತೋಲೆಯನ್ನು ವಾಪಸ್ ಪಡೆಯದಿದ್ದರೆ ಬಿಜೆಪಿಯು ನೊಂದವರ ಪರ ಹೋರಾಟ ನಡೆಸಲಿದೆ ಎಂದು ಸುನಿಲ್ ಎಚ್ಚರಿಸಿದರು.ಕಸ್ತೂರಿ ರಂಗನ್ ವರದಿಯಿಂದ ಅನ್ಯಾಯ:ಬೆಂಗಳೂರಿನಲ್ಲಿ ಕುಳಿತು ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಬಾರದು. ಬಿಜೆಪಿ ಸರ್ಕಾರದ ಅವಧಿಯಲ್ಲಿ ತರಾತುರಿಯಲ್ಲಿ ವರದಿ ಅನುಷ್ಠಾನಗೊಳಿಸಬಾರದು ಎಂದು ನಿರ್ಧರಿಸಲಾಗಿತ್ತು. ಕೃಷಿ, ಕಂದಾಯ, ಅರಣ್ಯ ಭೂಮಿಗೆ ಸಮಸ್ಯೆಯಾಗದಂತೆ ವರದಿ ಜಾರಿಗೊಳಿಸಬೇಕು. ಈಗಾಗಲೇ ಜನವಸತಿ ಇರುವ ಪ್ರದೇಶ, ಹಲವಾರು ವರ್ಷಗಳಿಂದ ಕೃಷಿ ಚಟುವಟಿಕೆ ಮಾಡುತ್ತಿರುವವರಿಗೆ ಕಸ್ತೂರಿ ರಂಗನ್ ವರದಿಯಿಂದ ಅನ್ಯಾಯವಾಗಬಾರದು. ಪ್ರಕೃತಿ ರಕ್ಷಣೆಯ ಬಗ್ಗೆ ವಿರೋಧವಿಲ್ಲ, ವರದಿಯನ್ನು ಸೂಕ್ತ ತಯಾರಿ ಇಲ್ಲದೇ ಜಾರಿಗೊಳಿಸಿ, ಜನರ ಬದುಕು ದುಸ್ತರವಾಗಬಾರದು ಎಂದು ಹೇಳಿದರು.ಬಿಜೆಪಿ ಪ್ರತಿಭಟನಾಕಾರರ ಮೇಲೆ ಪ್ರಕರಣ ದಾಖಲಿಸುವ ಹೊಸ ಪ್ರವೃತ್ತಿ ಪೋಲಿಸ್ ಇಲಾಖೆಯಿಂದ ಆರಂಭವಾಗಿದೆ. ಮಣಿಪಾಲದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸರ್ಕಾರವೇ ವಿಪಕ್ಷದ ಪ್ರತಿಭಟನೆ ಹಕ್ಕು ಕಸಿಯುತ್ತಿದೆ. ಇವೆಲ್ಲದರ ಬಗ್ಗೆ ರಾಜ್ಯ ಪೋಲಿಸ್ ಮಹಾನಿರ್ದೇಶಕರನ್ನು ಕರಾವಳಿ ಬಿಜೆಪಿ ಶಾಸಕರು ಭೇಟಿಯಾಗಿ ದೂರು ನೀಡುತ್ತೇವೆ ಎಂದು ಸುನಿಲ್ ಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕುಂದಾಪುರದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರಿನ ಗುರುರಾಜ್ ಗಂಟಿಹೊಳೆ, ಕಾಪುವಿನ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.