ಸಾರಾಂಶ
ಆಟೋ ಚಾಲಕರ ಪರಿಸ್ಥಿತಿಯಂತೂ ಶೋಚನೀಯವಾಗಿದ್ದು, ದಿನನಿತ್ಯದ ದುಡಿದ ಹಣ ಹಾಳಾದ ರಸ್ತೆಯ ಕಾರಣದಿಂದ ಆಟೋರಿಕ್ಷಾ ದುರಸ್ತಿಗೆ ಸರಿಯಾಗುತ್ತಿದೆ.
ಕಾರವಾರ: ನಗರದಿಂದ ತಾಲೂಕಿನ ಶಿರವಾಡಕ್ಕೆ ತಲುಪುವ ಹಬ್ಬುವಾಡ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಆಟೋರಿಕ್ಷಾ ಚಾಲಕ ಹಾಗೂ ಮಾಲೀಕರ ಸಂಘದಿಂದ ಗುರುವಾರ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಲಾಯಿತು.
ಹಬ್ಬುವಾಡ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಹೊಂಡಮಯವಾಗಿದೆ. ತ್ರಿಚಕ್ರ, ದ್ವಿಚಕ್ರ ವಾಹನ ಸವಾರರು ಭಯದಿಂದಲೇ ಈ ರಸ್ತೆಯಲ್ಲಿ ವಾಹನ ಓಡಿಸಬೇಕಾಗಿದೆ. ರೈಲ್ವೆ ನಿಲ್ದಾಣಕ್ಕೆ, ಕೈಗಾ ಎನ್‌ಪಿಸಿಎಲ್ ಘಟಕಕ್ಕೆ, ಹಲವು ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಸಂಬಂಧಿಸಿದ ಇಲಾಖೆ ರಸ್ತೆ ದುರಸ್ತಿ ಬಗ್ಗೆ ಗಮನ ನೀಡುತ್ತಿಲ್ಲ ಎಂದು ದೂರಿದರು.ಆಟೋ ಚಾಲಕರ ಪರಿಸ್ಥಿತಿಯಂತೂ ಶೋಚನೀಯವಾಗಿದ್ದು, ದಿನನಿತ್ಯದ ದುಡಿದ ಹಣ ಹಾಳಾದ ರಸ್ತೆಯ ಕಾರಣದಿಂದ ಆಟೋರಿಕ್ಷಾ ದುರಸ್ತಿಗೆ ಸರಿಯಾಗುತ್ತಿದೆ. ವಾಹನ ಸವಾರರು ರಸ್ತೆಯಲ್ಲಿನ ಹೊಂಡವನ್ನು ತಪ್ಪಿಸಲು ಹೋಗಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ರಸ್ತೆಯನ್ನು ಶೀಘ್ರದಲ್ಲಿ ಡಾಂಬರಿಕರಣಗೊಳಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಹಲವು ಬಾರಿ ಮನವಿ ನೀಡಲಾಗಿದ್ದು, ರಸ್ತೆ ದುರಸ್ತಿಗೆ ಒಂದಿಲ್ಲೊಂದು ನೆಪ ಹೇಳುತ್ತಿದ್ದಾರೆ. ಮುಂದಿನ ೧೦ ದಿನದೊಳಗೆ ರಸ್ತೆ ದುರಸ್ತಿಯಾಗದೇ ಇದ್ದರೆ ಆಟೋರಿಕ್ಷಾ ಚಾಲಕರು, ಮಾಲೀಕರು ಹಾಗೂ ಸಾರ್ವಜನಿಕರು ಸೇರಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮಂಜುನಾಥ ಪೂಜಾರಿ, ಸದಾನಂದ ನಾಯ್ಕ, ಗಜಾನನ ಗೋವೇಕರ, ನಾಗರಾಜ ನಾರ್ವೇಕರ, ಗೋಪಾಲ ಗೌಡ, ಸತೀಶ ಬಾಡಕರ ಮುಂತಾದವರು ಇದ್ದರು.ಶಾಸಕರಿಗೆ ಅವಾಚ್ಯ ಪದ ಬಳಸಿದ ಪಪಂ ಸದಸ್ಯನ ಬಂಧನ
ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಅವಾಚ್ಯ ಶಬ್ದ ಬಳಸಿ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿದ ಪಟ್ಟಣ ಪಂಚಾಯಿತಿ ಸದಸ್ಯ ಸೋಮೇಶ್ವರ ನಾಯ್ಕ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.ಪಟ್ಟಣದ ರವೀಂದ್ರ ನಗರ ವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ ತಮ್ಮ ಮೊಬೈಲ್ ಸ್ಟೇಟಸ್‌ನಲ್ಲಿ ಶಾಸಕರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದರು. ಇದರಿಂದ ಶಾಸಕರ ಗೌರವಕ್ಕೆ ಕುಂದುಂಟಾಗಿದೆ. ಆರೋಪಿ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಶಾಸಕ ಶಿವರಾಮ ಹೆಬ್ಬಾರ್ ಅಭಿಮಾನಿ ಅರಬೈಲು ಬಾಲಕೃಷ್ಣ ನಾಯ್ಕ ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪಪಂ ಸದಸ್ಯ ಸೋಮೇಶ್ವರ ನಾಯ್ಕ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.