ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಪಶ್ಚಿಮ ಘಟ್ಟವನ್ನು ರಕ್ಷಿಸುವ ಬಗ್ಗೆ ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದ್ದು, ಮಲೆನಾಡಿನ ಜನರ ಬದುಕು ಕಸಿಯುವ ಜನ ವಿರೋಧಿ ನಿಲುವಿನಿಂದ ಕೂಡಿದೆ. ಆದ್ದರಿಂದ ಈ ವರದಿಯಿಂದ ಮಲೆನಾಡಿನ ಜನವಸತಿ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಎದುರು, ಕುಂದಾಪುರದ ಜಡ್ಕಲ್ ಮುದೂರು ಗ್ರಾಮಸ್ಥರು ಪ್ರತಿಭಟನೆ ನಡೆಸಲಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಹೇಳಿದರು.ಅವರು ಭಾನುವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ವರದಿಯ ಜಾರಿಯಿಂದ ಜಿಲ್ಲೆಯಲ್ಲಿ ಸುಮಾರು 37ಕ್ಕೂ ಅಧಿಕ ಗ್ರಾಮಗಳು ಪರಿಸರದ ಅತೀ ಸೂಕ್ಷ್ಮ ಅರಣ್ಯ ವ್ಯಾಪ್ತಿಗೆ ಒಳಪಡುತ್ತವೆ. ಇದರಿಂದ ಇಲ್ಲಿನ ಜನರಲ್ಲಿ ತಮ್ಮನ್ನು ಒಕ್ಕಲೆಬ್ಬಿಸುವ ಆತಂಕ ಉಂಟಾಗಿದೆ. ಆದ್ದರಿಂದ ಈ ವರದಿ ಜನ ಜೀವನ ವಿರೋಧಿಯಾಗಿದೆ ಎಂದವರು ಹೇಳಿದರು. ಇತ್ತೀಚೆಗೆ ಜಡ್ಕಲ್ ಗ್ರಾ. ಪಂ.ನಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಕಸ್ತೂರಿ ರಂಗನ್ ವರದಿಯ ಜಾರಿಯಿಂದ ಉಂಟಾಗಬಹುದಾದ ಸಾಧಕ ಬಾಧಕಗಳ ಬಗ್ಗೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಜನರ ಅಭಿಪ್ರಾಯದಂತೆ ಈ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದರು.ಪತ್ರಿಕಾಗೋಷ್ಟಿಯಲ್ಲಿ ಜಡ್ಕಲ್ ನ ಪ್ರಮುಖರಾದ ಜೋಯ್ ವಿ.ಜೆ., ಗ್ರಾ.ಪಂ.ಸದಸ್ಯ ಲಕ್ಷ್ಮಣ ಶೆಟ್ಟಿ ಮುದೂರು, ರಂಜಿತ್ ಎಂ.ವಿ.ಮುದೂರು, ಜಿ.ಬಿ.ಮೋಹನ್ ಉಪಸ್ಥಿತರಿದ್ದರು.