ಸ್ಮಶಾನಕ್ಕೆ ರಸ್ತೆ ನಿರ್ಮಿಸದಿದ್ದರೆ ಡಿಸಿ ಕಚೇರಿ ಎದುರು ಪ್ರತಿಭಟನೆ

| Published : Sep 02 2025, 01:00 AM IST

ಸ್ಮಶಾನಕ್ಕೆ ರಸ್ತೆ ನಿರ್ಮಿಸದಿದ್ದರೆ ಡಿಸಿ ಕಚೇರಿ ಎದುರು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಹೊಲಗಳಿಗೆ ರಸ್ತೆ ನಿರ್ಮಿಸಿದ್ದೇವೆಂದು ಶಾಸಕರು ಹೇಳುತ್ತಾರೆ. ಆದರೆ, ಶವಸಂಸ್ಕಾರಕ್ಕೆ ತೆರಳಲು ನಿರ್ಮಿಸಬೇಕಾದ ರಸ್ತೆಯನ್ನೇ ನಿರ್ಮಿಸಿಲ್ಲ. ಇದರಿಂದ ಗ್ರಾಮದಲ್ಲಿ ಯಾರಾದರೂ ತೀರಿಕೊಂಡರೆ ತೀವ್ರ ಸಮಸ್ಯೆಯಾಗುತ್ತಿದೆ.

ನವಲಗುಂದ: ಸ್ಮಶಾನಕ್ಕೆ ತೆರಳಲು ರಸ್ತೆ ನಿರ್ಮಾಣ ಮಾಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಶವವಿಟ್ಟು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಾಲೂಕಿನ ಸೊಟಕನಾಳ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಸೊಟಕನಾಳ ಗ್ರಾಮದಲ್ಲಿ ಶವಸಂಸ್ಕಾರ ಮಾಡಲು ತೆರಳಲು ರಸ್ತೆ ಇಲ್ಲವೆಂದು ಗ್ರಾಮಸ್ಥರು ಶವವನ್ನು ರಸ್ತೆ ಮೇಲಿಟ್ಟು ಎರಡು ದಿನದ ಹಿಂದೆಯಷ್ಟೇ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ತಾಪಂ ಸಭಾಭವನದಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಲು ತಹಸೀಲ್ದಾರ್‌, ತಾಪಂ ಅಧಿಕಾರಿಗಳು ಸಭೆ ಕರೆದಿದ್ದರು. ಆ ಸಭೆಯಲ್ಲಿ ಗ್ರಾಮಸ್ಥರು ಮೇಲಿನಂತೆ ಎಚ್ಚರಿಕೆ ನೀಡಿದರು.

ರೈತರ ಹೊಲಗಳಿಗೆ ರಸ್ತೆ ನಿರ್ಮಿಸಿದ್ದೇವೆಂದು ಶಾಸಕರು ಹೇಳುತ್ತಾರೆ. ಆದರೆ, ಶವಸಂಸ್ಕಾರಕ್ಕೆ ತೆರಳಲು ನಿರ್ಮಿಸಬೇಕಾದ ರಸ್ತೆಯನ್ನೇ ನಿರ್ಮಿಸಿಲ್ಲ. ಇದರಿಂದ ಗ್ರಾಮದಲ್ಲಿ ಯಾರಾದರೂ ತೀರಿಕೊಂಡರೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು.

ಸೊಟಕನಾಳ ಗ್ರಾಮದಲ್ಲಿ 20 ಗುಂಟೆ ಜಾಗೆಯನ್ನು ಸ್ಮಶಾನಕ್ಕಾಗಿ ನೀಡಲಾಗಿದೆ. ಆದರೆ, ಸ್ಮಶಾನಕ್ಕೆ ತೆರಳುವ ರಸ್ತೆ ನಿರ್ಮಾಣ ಮಾಡಿಲ್ಲ. ಖಾಸಗಿ ಜಮೀನು ಮಾಲೀಕರು ಬೆಳೆಗಳನ್ನು ಬೆಳೆಯುತ್ತಿರುವುದರಿಂದ ಬೆಳೆಗಳು ಹಾಳಾಗುತ್ತವೆ. ಹೀಗಾಗಿ ಅವರ್‍ಯಾರು ತಮ್ಮ ಹೊಲಗಳಲ್ಲಿ ನಡೆದುಕೊಂಡು ಹೋಗಲು ಬಿಡುವುದಿಲ್ಲ. ಸಶ್ಮಾನಕ್ಕೆ ತೆರಳಲು ರಸ್ತೆಯೇ ಇಲ್ಲವೆಂದರೆ ಶವಸಂಸ್ಕಾರ ಮಾಡುವುದಾದರೂ ಹೇಗೆ? ತಕ್ಷಣವೇ ರಸ್ತೆ ಮಾಡದಿದ್ದಲ್ಲಿ ಅಷ್ಟರಲ್ಲೇ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಆ ಶವವನ್ನು ತೆಗೆದುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಲ್ಲೇ ಪ್ರತಿಭಟನೆ ನಡೆಸುತ್ತೇವೆ ಎಂದು ವೀರನಗೌಡ ಹಿರೇಗೌಡರ ಎಚ್ಚರಿಕೆ ನೀಡಿದರು.

ಶಿವು ಗುಡಸಲಮನಿ ಮಾತನಾಡಿ, ಗ್ರಾಮದಲ್ಲಿ ಇತ್ತೀಚಿಗೆ ನಿಧನರಾದ ಮಲ್ಲವ್ವ ಆನಂದಿ ಅವರ ಶವವನ್ನು ತಹಸೀಲ್ದಾರ್ ಕಚೇರಿಗೆ ತಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ತಹಸೀಲ್ದಾರರು ಮಧ್ಯಸ್ಥಿಕೆ ವಹಿಸಿ ಶೀಘ್ರದಲ್ಲಿ ಸ್ಮಶಾನ ರಸ್ತೆ ನಿರ್ಮಾಣಕ್ಕೆ ಭರವಸೆ ನೀಡಿದ ಪರಿಣಾಮ ಪ್ರತಿಭಟನೆ ಹಿಂಪಡೆಯಲಾಗಿತ್ತು. ಆದರೆ, ಸೋಮವಾರ ಕರೆದ ಸಭೆಗೆ ತಹಸೀಲ್ದಾರ್‌ ಸುಧೀರ ಸಾಹುಕಾರ್‌ ಅವರೇ ಬಂದಿಲ್ಲ. ಇದು ನಿರ್ಲಕ್ಷ್ಯಕ್ಕೆ ಕೈಹಿಡಿದಂತಾಗಿದೆ. ಕೂಡಲೇ ಸ್ಮಶಾನ ರಸ್ತೆ ನಿರ್ಮಿಸದಿದ್ದಲ್ಲಿ ಗ್ರಾಮಸ್ಥರು ಮತ್ತೆ ಹೋರಾಟಕ್ಕೀಳಿಯುವುದು ಅನಿವಾರ್ಯ ಎಂದರು.

ತಾಪಂ ಯೋಜನಾಧಿಕಾರಿ ಬಿ.ಎಸ್. ಪಾಟೀಲ್ ಮಾತನಾಡಿ, ಸಭೆಯಲ್ಲಿ ನಡೆದ ವಿಷಯಗಳ ಕುರಿತು ಗ್ರಾಮಸ್ಥರ ಮನವಿ ಸಮೇತ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ಎಸ್.ಬಿ. ತೋಟದ, ಕೆ.ಎಂ. ಕೋಳಿ, ವಾಸುದೇವ ಮುಕ್ಕಣ್ಣವರ, ಎಂ.ಎಸ್. ಹೂಗಾರ, ಗ್ರಾಮಸ್ಥರಾದ ಚನ್ನಪ್ಪಗೌಡ ಹಿರೇಗೌಡರ, ನಾಗರಾಜ ತಳವಾರ, ಸಂಕ್ರಪ್ಪ ಚಲವಾದಿ, ಅಶೋಕ ಕೊಣ್ಣೂರ, ಶಿವಾನಂದ ಚಿಕ್ಕನರಗುಂದ, ಬಸವರಡ್ಡಿ ಕಿರೇಸೂರ, ಸಿದ್ದಪ್ಪ ಹಾಲವರ, ಬಸಪ್ಪ ಆನಂದಿ, ರವಿರಡ್ಡಿ ರೂಗಿ, ಮಹೇಶ ಆನಂದಿ, ಅಶೋಕರಡ್ಡಿ ವೆಂಕರಡ್ಡಿ, ಹನಮರಡ್ಡಿ ದೇವರಡ್ಡಿ ಮತ್ತಿತರರಿದ್ದರು.