ಸಾರಾಂಶ
ಕನ್ನಡಪ್ರಭವಾರ್ತೆ ಹಾಸನನಗರದ ಹೊರವಲಯದ ಕೈಗಾರಿಕಾ ಅಭಿವೃದ್ಧಿ ಪ್ರದೇಶಕ್ಕೊಳಪಟ್ಟಿರುವ ನಾಗತವಳ್ಳಿ ಗ್ರಾಮದ ಬಳಿ ಉದ್ಯಾನವನಕ್ಕೆಂದು ಮೀಸಲಿಟ್ಟ ಎರಡು ಎಕರೆ ಜಾಗವನ್ನು ಕೆಐಎಡಿಬಿ ಅಧಿಕಾರಿಗಳು ಲಂಚ ಪಡೆದು ಉದ್ದಿಮೆದಾರರಿಗೆ ಜಾಗ ಮಾರಾಟ ಮಾಡಿದ್ದು, ನಂತರ ಇಲ್ಲಿದ್ದ ಗಣಪತಿ ದೇವಸ್ಥಾನವನ್ನು ಉರುಳಿಸಿದ್ದು, ಇದನ್ನು ಖಂಡಿಸಿ ಹೊಳೆನರಸೀಪುರ ರಸ್ತೆ ಬಳಿ ಇರುವ ಕಐಎಡಿಬಿ ಕಚೇರಿ ಮುಂದೆ ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಪಂ ಸದಸ್ಯ ಹಾಗೂ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ದೇವರಾಜು ಮಾಧ್ಯಮದೊಂದಿಗೆ ಮಾತನಾಡಿ, ನಾಗತವಳ್ಳಿ ಗ್ರಾಮದ ಸರ್ವೆ.ನಂ. ೫೪ರ ಸರ್ಕಾರಿ ಗೋಮಾಳ ೨ ಎಕರೆ ಜಾಗದಲ್ಲಿ ಉದ್ಯಾನವನ ಮಾಡಲು ನಿರ್ಧರಿಸಿದ್ದು, ನಾವು ಇಲ್ಲಿ ಉದ್ಯಾನವನ್ನು ನಿರ್ಮಿಸಿ ಇಲ್ಲಿಯ ನಿವಾಸಿಗಳಿಗೆ, ಮಕ್ಕಳಿಗೆ ವೃದ್ಧರಿಗೆ ಹಾಗೂ ಈ ಪ್ರದೇಶದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ಈ ಉದ್ಯಾನವನ ಅನುಕೂಲವಾಗುತ್ತದೆ. ಈಗಾಗಲೇ ಸುಮಾರು ವರ್ಷಗಳಿಂದ ಈ ಜಾಗದಲ್ಲಿ ಒಂದು ಉದ್ಯಾನವನ ಮಾಡಬೇಕೆಂದು ಊರಿನ ಗ್ರಾಮಸ್ಥರೆಲ್ಲರೂ ಸೇರಿ ತೀರ್ಮಾನಿಸಿದ್ದರು. ಹಾಗೂ ಈ ಗ್ರಾಮದ ಸುತ್ತ ಮುತ್ತ ಯಾವುದೇ ಉದ್ಯಾನವನ ಇರುವುದಿಲ್ಲ ಎಂದರು.ಆದರಿಂದ ಈಗಲಾದರೂ ಗ್ರಾಮಸ್ಥರೆಲ್ಲಾ ಸೇರಿ ಈ ಯೋಜನೆಯನ್ನು ಹಾಕಿಕೊಂಡು ಉದ್ಯಾನವನವನ್ನು ನಿರ್ಮಿಸಿಬೇಕೆಂದು ತೀರ್ಮಾನಿಸಿರುತ್ತೇವೆ. ಉದ್ಯಾನವನ್ನು ನಿರ್ಮಿಸಿದರೆ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ. ಹಾಗೂ ಕೆಲವು ಭಾಗಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಮೀಸಲಿರಿಸಬೇಕಾಗಿ ಮನವಿ ಮಾಡುತ್ತೇವೆ. ಊರಿನ ಗ್ರಾಮಸ್ಥರೆಲ್ಲರೂ ಸೇರಿ ಗ್ರಾಪಂ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಅಥವಾ ಇತರೆ ಅನುದಾನದಡಿ ಈ ಉದ್ಯಾನವನ್ನು ನಿರ್ಮಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಕೂಡ ಸಲ್ಲಿಸಿರುತ್ತೇವೆ ಎಂದು ಹೇಳಿದರು. ಸರಕಾರಿ ಗೋಮಾಳವನ್ನು ಕೆಐಇಡಿಬಿಐ ರವರು ೧೯೯೩ ರಲ್ಲಿ ಹೊಳೆನರಸೀಪುರ ರಸ್ತೆ, ಕೈಗಾರಿಕ ಪ್ರದೇಶವನ್ನು ವಹಿಸಿಕೊಂಡಿದ್ದು, ಅಂದಿನಿಂದ ೨ ಎಕರೆ ಜಾಗವನ್ನು ಉದ್ಯಾನವನಕ್ಕೆಂದು ಮೀಸಲಿಟ್ಟಿದ್ದರು. ಆದರೇ ಈಗ ಲಂಚ ಪಡೆದು ಯಾರೋ ಉದ್ದಿಮೆದಾರರಿಗೆ ಪಾರ್ಕ್ ಜಾಗ ಮಾರಾಟ ಮಾಡಿದ್ದಾರೆ. ಪಾರ್ಕ್ ಜಾಗ ಬಿಡುವವರೆಗೂ ನಾವುಗಳು ಇಲ್ಲಿಂದ ಹೋಗುವುದಿಲ್ಲ. ನ್ಯಾಯಾಲಯದಲ್ಲಿ ಇದ್ದ ಈ ಕೇಸ್ ವೇಳೆ ಕೆಐಡಿಬಿಐ ಪರವಾಗಿರುವ ವಕೀಲರು ಸರಿಯಾಗಿ ನಿರ್ವಹಣೆ ಮಾಡದೇ ಹಣ ಪಡೆದು ಕೋರ್ಟಿಗೆ ಹಾಜರಾಗದೇ ಸುಮ್ಮನಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಇರುವ ಗೋಮಾಳ ಜಾಗವನ್ನು ಪಾರ್ಕಿಗೆ ಕೊಡಬೇಕು. ನಾವು ಈ ಕಚೇರಿಗೆ ಹೊಡೆದಾಟ ಮಾಡಲು ಬಂದಿಲ್ಲ. ಬೇಕಾದರೇ ನಮ್ಮನ್ನು ಬಂಧಿಸಲಿ. ಇನ್ನು ಪಾರ್ಕ್ ಜಾಗದಲ್ಲಿದ್ದ ಗಣಪತಿ ದೇವಸ್ಥಾನವನ್ನೆ ಜಗದೀಶ್ ಎನ್ನುವವರು ಜೆಸಿಬಿಯಲ್ಲಿ ಹೊಡೆದು ಹಾಕಲಾಗಿದ್ದು, ಈ ಬಗ್ಗೆ ಪೋಲಿಸರು ದೂರು ದಾಖಲಿಸಲಿಲ್ಲ ಎಂದು ದೂರಿದರು. ಹಿಂದೂ ಧರ್ಮಕ್ಕೆ ದಕ್ಕೆ ತಂದಿದ್ದಾರೆ. ಯಾರು ಹಿಂದು ಧರ್ಮಿಗಳಿದ್ದಾರೆ ಇದಕ್ಕೆ ಬಂದು ನ್ಯಾಯ ಕೊಡಸಬೇಕು. ನ್ಯಾಯಾ ಸಿಗದಿದ್ದರೇ ಹತ್ತಾರು ಹಳ್ಳಿಯಿಂದ ಬಂದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಎಕರೆ ಭೂಮಿ ಬಳಿ ಮತ್ತು ಕೆಐಇಡಿಬಿಐ ಕಚೇರಿ ಮುಂದೆ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನೆಯಲ್ಲಿ ಗ್ರಾಮದ ವಿಶ್ವನಾಥ್, ಶೇಖರ್, ಮಂಜುಳಮ್ಮ, ಗಿಡ್ಡಮ್ಮ, ರೇಣುಕಾ, ಚಂದ್ರಿಕಾ, ಸುಶೀಲಾ, ಕನಕ, ಲಕ್ಷ್ಮಮ್ಮ, ಕುಮಾರಿ, ನಂಜೇಗೌಡ ಇತರರು ಉಪಸ್ಥಿತರಿದ್ದರು.