ನಾಳೆ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ ಎದುರು ಉಪವಾಸ ಸತ್ಯಾಗ್ರಹ

| Published : Feb 21 2024, 02:00 AM IST

ನಾಳೆ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ ಎದುರು ಉಪವಾಸ ಸತ್ಯಾಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.22ರಂದು ಇಲ್ಲಿನ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.22ರಂದು ಇಲ್ಲಿನ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿಯ ಕಲ್ಯಾಣ ಕರ್ನಾಟಕ ವಲಯ ಸಮಿತಿ ಅಧ್ಯಕ್ಷ ಚಂದ್ರಕಾಂತ ಗದ್ದಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಾಯಕತ್ವದಲ್ಲಿ ಸಾರಿಗೆ ನೌಕರರ ರಾಜ್ಯ ಸಮಾವೇಶ ಫೆ.14ರಂದು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿದೆ. ಈ ವೇಳೆ, ಸಾರಿಗೆ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರ ಹಾಗೂ ಆಡಳಿತ ವರ್ಗದ ಮುಂದೆ ಬೇಡಿಕೆಗಳನ್ನು ಇಡಲಾಗಿದೆ. ಈ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಡಿ.31, 2023ರ ಮೂಲ ವೇತನದ ಶೇ.25ರಷ್ಟು ಹೆಚ್ಚಳ ಮಾಡಿ ಜ.1, 2024ರಿಂದ ವೇತ್ರನ ಶ್ರೇಣಿ ಸಿದ್ಧಪಡಿಸಬೇಕು. ಜ.1, 2020ರಿಂದ ಆಗಿರುವ ಶೇ.15 ವೇತನ ಹೆಚ್ಚಳದ 38 ತಿಂಗಳ ಬಾಕಿ ತಕ್ಷಣ ಬಿಡುಗಡೆ ಮಾಡಬೇಕು. ಜ.1, 2020ರಿಂದ ಫೆ.28, 2023ರ ಅವಧಿ ಮಧ್ಯೆ ನಿವೃತ್ತರಾಗಿರುವ, ಮೃತಪಟ್ಟಿರುವ, ವಜಾಗೊಂಡಿರುವ ಹಾಗೂ ಕಾರಣಾಂತರಗಳಿಂದ ಸೇವೆಯಿಂದ ನಿರ್ಗಮಿಸಿರುವ ಎಲ್ಲ ಸಾರಿಗೆ ನೌಕರರಿಗೆ ಜ.1, 2020ರಿಂದ ಜಾರಿ ಮಾಡಿರುವ ವೇತನ ಶ್ರೇಣಿಗಳನ್ನು ಅನ್ವಯಿಸಿ, ಎಲ್ಲ ರೀತಿಯ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿ 10 ವರ್ಷಕ್ಕೊಮ್ಮೆ ಆಯ್ಕೆ ಶ್ರೇಣಿ ಬಡ್ತಿ ನೀಡಬೇಕು. ಆ.8, 2023ರಂದು ಸಮಿತಿ ವತಿಯಿಂದ ಸಲ್ಲಿಸಿರುವ ಬೇಡಿಕೆಗಳಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಮನವಿ ಮಾಡಿದರು. ಚಾಲಕರು, ನಿರ್ವಾಹಕರು, ತಾಂತ್ರಿಕ, ಆಡಳಿತ ಸಿಬ್ಬಂದಿ ಮತ್ತು ಇತರ ಎಲ್ಲ ನೌಕರರಿಗೆ ನೀಡಲಾಗುತ್ತಿರುವ ಭತ್ಯೆಗಳಲ್ಲಿ ಐದು ಪಟ್ಟು ಹೆಚ್ಚಳ ಮಾಡಬೇಕು. ಎಲ್ಲ ನೌಕರರಿಗೂ ಪ್ರತಿ ತಿಂಗಳು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯಲು ರು.2000 ನೀಡುವುದರ ಜೊತೆಗೆ, ಉಚಿತವಾಗಿ ಔಷಧ ವ್ಯವಸ್ಥೆ ಮಾಡಬೇಕು. ನೌಕರರ ಮೂಲ ವೇತನದ ಶೇ.4.5 ಹಾಗೂ ನೌಕರರಿಂದ ಶೇ.0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಈ ಸಾರಿಗೆ ನೌಕರರಿಗೆ ಇಎಸ್‌ಐ ಮಾದರಿಯಲ್ಲಿ ಆಡಳಿತ ವರ್ಗದಿಂದ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ವ್ಯವಸ್ಥೆ ಮಾಡಬೇಕು. ಈ ಸೌಲಭ್ಯ ನಿವೃತ್ತ ನೌಕರರ ಕುಟುಂಬಗಳಿಗೂ ಲಭಿಸುವಂತಾಗಬೇಕು ಎಂದು ಗದ್ದಗಿ ಕೋರಿದರು.

2023ರ ಅವಧಿಗೆ ಕಡಿತಗೊಳಿಸಿರುವ ಅಪಘಾತ ವಿಮೆ ಪ್ರೀಮಿಯಂ ಮರು ಪಾವತಿಸಬೇಕು. 2024ರ ಅವಧಿಯ ವಿಮೆ ಕಂತು ಆಡಳಿತ ವರ್ಗವೇ ಭರಿಸಬೇಕು. ಸೇವಾನಿರತ ಅವಧಿಯಲ್ಲಿ ಸಹಜವಾಗಿ ಅಥವಾ ಅಪಘಾತದಲ್ಲಿ ಮೃತಪಡುವ ಸಾರಿಗೆ ನೌಕರರ ಸಂತ್ರಸ್ತ ಕುಟುಂಬಕ್ಕೆ ಕೆಎಸ್ಸಾರ್ಟಿಸಿ ರೀತಿಯಲ್ಲಿ ಅನುಕ್ರಮವಾಗಿ ರು.10 ಲಕ್ಷ ಹಾಗೂ ರು.1 ಕೋಟಿ ಪರಿಹಾರ ನೀಡುವ ಪದ್ಧತಿ ಜಾರಿಗೊಳಿಸಬೇಕೆಂದು ಹಕ್ಕೊತ್ತಾಯ ಮಂಡಿಸಿದರು.

ಮುದ್ರಣಾಲಯ ಮತ್ತು ಕಾರ್ಯಾಗಾರಗಳ ತಾಂತ್ರಿಕ ಸಿಬ್ಬಂದಿಗೆ ಪ್ರತಿ 10 ವರ್ಷಕ್ಕೊಮ್ಮೆ ಮುಂಬಡ್ತಿ ನೀಡಬೇಕು. ಸಾರಿಗೆ ನಿಗಮಗಳ ವಿದ್ಯುತ್ ಚಾಲಿತ ಬಸ್‍ಗಳಲ್ಲಿ ಸಂಸ್ಥೆಯ ಚಾಲಕರನ್ನೇ ಚಾಲನಾ ಕೆಲಸಕ್ಕೆ ನಿಯೋಜಿಸಬೇಕು. ಶಕ್ತಿ ಯೋಜನೆಯಿಂದ ಚಾಲಕರು ಹಾಗೂ ನಿರ್ವಾಹಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ (ಎಐಟಿಯುಸಿ) ಕಾರ್ಯಾಧ್ಯಕ್ಷ ಸಿದ್ದಪ್ಪ ಪಾಲ್ಕಿ, ಎನ್‍ಇಕೆಆರ್‍ಟಿಸಿ ಎಸ್ಸಿ-ಎಸ್ಟಿ ಎಂಪ್ಲಾಯಿಸ್ ಅಸೋಸಿಯೇಷನ್, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಹೈಯಾಳಕರ್, ಕೆಎಸ್ಸಾರ್ಟಿಸಿ ಎಸ್ಸಿ-ಎಸ್ಟಿ ಎಂಪ್ಲಾಯಿಸ್ ಯೂನಿಯನ್ ಕಲ್ಯಾಣ ಕರ್ನಾಟಕ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ರಾಠೋಡ್, ಕ.ರಾ.ರ.ಸಾ ಸಂಸ್ಥೆ ಪ.ಜಾ/ಪ.ಪಂ. ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಕಲ್ಯಾಣ ಕರ್ನಾಟಕ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗ ನ್ಯಾಮನ್ ಇದ್ದರು.