ಕುಡಿಯುವ ನೀರಿಗಾಗಿ ಲಕ್ಷ್ಮೇಶ್ವರ ಪುರಸಭೆಯ ಎದುರು ಪ್ರತಿಭಟನೆ

| Published : Oct 03 2024, 01:26 AM IST

ಸಾರಾಂಶ

ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ನೇತೃತ್ವದಲ್ಲಿ ಲಕ್ಷ್ಮೇಶ್ವರ ಪುರಸಭೆ ವ್ಯಾಪ್ತಿಯ ವಾರ್ಡ್‌ ನಂ. 15 ಗೋಸಾವಿ ಸಮಾಜದ ಪುರುಷರು, ಮಹಿಳೆಯರು ಸೇರಿ ಪುರಸಭೆ ಎದುರು ಮಂಗಳವಾರ ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸಿ, ಪುರಸಭೆ ಉಪಾಧ್ಯಕ್ಷ ಫಿರ್ದೋಷ ಆಡೂರ ಅವರಿಗೆ ಮನವಿ ಸಲ್ಲಿಸಿದರು.

ಲಕ್ಷ್ಮೇಶ್ವರ: ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ನೇತೃತ್ವದಲ್ಲಿ ವಾರ್ಡ್‌ ನಂ. 15 ಗೋಸಾವಿ ಸಮಾಜದ ಪುರುಷರು ಮಹಿಳೆಯರು ಸೇರಿ ಪುರಸಭೆ ಎದುರು ಮಂಗಳವಾರ ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸಿ, ಪುರಸಭೆ ಉಪಾಧ್ಯಕ್ಷ ಫಿರ್ದೋಷ ಆಡೂರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕರವೇ ಪ್ರವೀಣ ಶೆಟ್ಟಿ ಬಣದ ತಾಲೂಕಾಧ್ಯಕ್ಷ ಮಹೇಶ ಕಲಘಟಗಿ ಮಾತನಾಡಿ, ಲಕ್ಷ್ಮೇಶ್ವರ ಪಟ್ಟಣಕ್ಕೆ ಕಳೆದ ಎರಡು ತಿಂಗಳಿಂದ ಕುಡಿಯುವ ನೀರು ಇಲ್ಲದೆ ಜನರು ಪರದಾಡುತ್ತಿದ್ದರೂ ಪುರಸಭೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಇದ್ಯಾವುದೂ ತಮಗೆ ಸಂಬಂಧಿಸಿದ್ದು ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸುವ ಮೂಲಕ ಜನರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ. ಪಟ್ಟಣದ 15ನೇ ವಾರ್ಡ್‌ನ ಗೋಸಾವಿ ಸಮಾಜದ 30 ಕುಟುಂಬ 150ಕ್ಕಿಂತ ಹೆಚ್ಚು ಜನರು ಕಳೆದ 30 ವರ್ಷಗಳಿಂದ ಯಾವುದೇ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಚರಂಡಿ, ವಿದ್ಯುತ್, ಶೌಚಾಲಯ ಇಲ್ಲದೆ ಜೀವನ ನಿರ್ವಹಣೆ ಮಾಡುತ್ತಿದ್ದು, ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಪುರಸಭೆಯ ಸದಸ್ಯರು ವೋಟ್ ಕೇಳುವಾಗ ನಮ್ಮ ಬಳಿ ಬಂದು, ಅದನ್ನು ಮಾಡಿ ಕೊಡುತ್ತೇನೆ, ಇದನ್ನು ಮಾಡಿ ಕೊಡುತ್ತೇನೆ ಎಂದು ಬರಿ ಪುಂಗಿ ಊದಿ ಹೋಗುತ್ತಿದ್ದಾರೆ. ಆದರೆ ಕೆಲಸ ಮಾತ್ರ ಶೂನ್ಯ ಎಂಬಂತಾಗಿದೆ. ಕೊಳಚೆ ಪ್ರದೇಶವಾಗಿ ಮಾರ್ಪಾಡಾಗಿರುವ ಕಾರಣ ಇಲ್ಲಿರುವ ದೇವಸ್ಥಾನಕ್ಕೂ ಭಕ್ತರು ಬರಲು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೆಣ್ಣುಮಕ್ಕಳು ಬಯಲು ಶೌಚಾಲಯಕ್ಕೆ ಚರಂಡಿಗೆ ಹೋಗುವ ಪರಿಸ್ಥಿತಿ ಇದೆ. ಚರಂಡಿ ಗಲೀಜು ಮನೆತನಕ ಬರುವುದರಿಂದ ರೋಗ-ರುಜಿನಗಳು ಹರಡುತ್ತಿವೆ. ಬಡವರ ಇರುವ ಈ ಪ್ರದೇಶಕ್ಕೆ ಸೌಕರ್ಯ ಒದಗಿಸಬೇಕು. ಅ. 3ರ ವರೆಗೆ ಗಡುವು ಕೊಡುತ್ತಿದ್ದು, ಸಮಸ್ಯೆ ಬಗೆಹರಿಸದಿದ್ದರೆ ಅ. 4ರಂದು ಪುರಸಭೆ ಮುಂದೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಬಾಳಪ್ಪ ಗೋಸಾವಿ, ದಾದಪ್ಪ ಗೋಸಾವಿ, ನಿಖಿಲ ಗೋಸಾವಿ, ಹರೀಶ ಗೋಸಾವಿ, ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತ ಮಂಜುನಾಥ ಗಾಂಜಿ, ಅಮರೀಶ ಗಾಂಜಿ, ಶ್ರೇಯಾಂಕ ಹಿರೇಮಠ, ಬರಮಣ್ಣ ಗೌಳಿ, ಚಂದ್ರು ಪಾಣಿಗಟ್ಟಿ, ಪ್ರವೀಣ ದಶಮನಿ, ನವೀನ ಗುರಿಕಾರ, ಮುರಳೀಧರ ಮಲಸಮುದ್ರ ಹಾಗೂ 15ನೇ ವಾರ್ಡಿನ ಗೋಸಾವಿ ಸಮಾಜದವರು ಇದ್ದರು.