ಸಾರಾಂಶ
ಏರಿಕೆಯಾದ ವಿದ್ಯುತ್ ಬೆಲೆ ಕಡಿಮೆ ಮಾಡಿ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಸಮರ್ಪಕವಾದ ವಿದ್ಯುತ್ ನೀಡದೆ ರೈತರ ಜೀವನದ ಜೂತೆ ಚೆಲ್ಲಾಟವಾಡುತ್ತಿರುವ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಗುಣಮಟ್ಟದ ೧೦ ತಾಸು ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ಏ.10ರಂದು ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣ ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಮಾಲೂರು
ಏರಿಕೆಯಾದ ವಿದ್ಯುತ್ ಬೆಲೆ ಕಡಿಮೆ ಮಾಡಿ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಸಮರ್ಪಕವಾದ ವಿದ್ಯುತ್ ನೀಡದೆ ರೈತರ ಜೀವನದ ಜೂತೆ ಚೆಲ್ಲಾಟವಾಡುತ್ತಿರುವ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಗುಣಮಟ್ಟದ ೧೦ ತಾಸು ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ಏ.10ರಂದು ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣ ಗೌಡ ಹೇಳಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪ್ರಕೃತಿ ವಿಕೋಪ ನಕಲಿ ಬೀಜ, ರೋಗಗಳ ಹಾವಳಿಯಿಂದ ರೈತರು ಬೆಳೆಗಳಿಗೆ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಕಣ್ಣ ಮುಂದೆಯೇ ಬೆಳೆ ನಾಶ ಒಂದು ಕಡೆಯಾದರೆ ಮತ್ತೊಂದೆಡೆ ಬೆಳೆ ಸಮೃದ್ಧವಾಗಿ ಮಾರುಕಟ್ಟೆಗೆ ಉತ್ತಮ ಬೆಳೆ ಸಂಗ್ರಹವಾಗಿದ್ದರೂ ಉತ್ತಮ ಬೆಲೆ ಸಿಗುತ್ತಿಲ್ಲ. ಸಕಾಲದಲ್ಲಿ ವಿದ್ಯುತ್ ಇಲ್ಲದ ಕಾರಣ ಬೆಳೆಗಳಿಗೆ ನೀರು ಹಾಯಿಸಲಾಗದೆ ಬೆಳೆ ಒಣಗುತ್ತಿದ್ದು, ಬೆಸ್ಕಾಂ ಇಲಾಖೆಯೇ ಇದಕ್ಕೆ ನೇರ ಹೊಣೆಯಾಗಿದೆ ಎಂದರು.ತಾಲೂಕು ಅಧ್ಯಕ್ಷ ಪೆಮ್ಮದೂಡ್ಡಿ ಯಲ್ಲಣ್ಣ ಮಾತನಾಡಿ, ಪರೀಕ್ಷೆ ಸಮಯದಲ್ಲಿ ರಾತ್ರಿಯ ವೇಳೆ ಆದೇಶ ಇಲ್ಲದಿದ್ದರೂ ವಿದ್ಯುತ್ ಕಡಿತ ಮಾಡಿ ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ. ಈ ಬಗ್ಗೆ ಗಮನಹರಿಸಬೇಕಾದ ಜನಪ್ರತಿನಿಧಿ ಜಾಣ ಕುರುಡು ಪ್ರದರ್ಶನ ಮಾಡುತ್ತಿರುವುದು ಸರಿ ಅಲ್ಲ. ಇಂತಹ ದನಿ ಇಲ್ಲದ ಜನಪ್ರತಿನಿಧಿಗಳಿಗೆ ಪ್ರತಿಭಟನೆ ಮೂಲಕ ಕಣ್ಣು ತೆರಸಬೇಕಾದ ಕಾರ್ಯ ರೈತ ಸಂಘ ಮಾಡಲಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಲೋಡ್ ಶೆಡ್ಡಿಂಗ್ ಗ್ರಾಮೀಣ ಪ್ರದೇಶದ ರೈತರಿಗೆ ಮಾತ್ರ ಅನ್ವಯಿಸುತ್ತಿದೆ. ಈ ಲೋಡ್ ಶೆಡ್ಡಿಂಗ್ ಪಟ್ಟಣದ ಉಳ್ಳವರ ಪ್ರದೇಶದಲ್ಲಿ ಮಾತ್ರ ಅನ್ವಯ ಆಗುವುದಿಲ್ಲ ಏಕೆ ಎಂದು ಪ್ರಶ್ನಿಸಿದರು.ಪ್ರಗತಿ ಪರ ರೈತ ಪುತ್ತೇರಿ ರಾಜು ಮಾತನಾಡಿ, ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಒಂದು ಎಕರೆ ಬೆಳೆಗೆ ನೀರು ಹಾಯಿಸಬೇಕಾದರೆ ಕನಿಷ್ಠ ಪಕ್ಷ 3 ದಿನ ಕೊಳವೆ ಬಾವಿಗಳ ಹತ್ತಿರ ಠಿಕಾಣಿ ಹೂಡಿ ರಾತ್ರಿ ಹಗಲು ಶ್ರಮ ಪಡಬೇಕಾದ ಪರಿಸ್ಥಿತಿಯಿದೆ. ಜತೆಗೆ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ಒಂದೇ ದಿನದಲ್ಲಿ ಬೆಸ್ಕಾಂ ಅಧಿಕಾರಿಗಳ ರೈತ ವಿರೋಧಿ ನೀತಿಗೆ ನಾಶವಾಗುತ್ತಿದೆ. ಇಷ್ಟೆಲ್ಲ ತೊಂದರೆ ಅನುಭವಿಸುತ್ತಿದ್ದರೂ ಸ್ಥಳೀಯ ಜನ ಪ್ರತಿನಿಧಿಗಳ ಚಕಾರವೆತ್ತುತ್ತಿಲ್ಲ. 24 ಗಂಟೆಯಲ್ಲಿ ಗುಣಮಟ್ಟದ 10 ತಾಸು ವಿದ್ಯುತ್ ನೀಡುವ ಜೊತೆಗೆ ಟಿಸಿ ಸುಟ್ಟರೆ ಲಂಚ ಇಲ್ಲದೇ 12 ತಾಸುಗಳಲ್ಲಿ ಸರಿಪಡಿಸುವಂತೆ ಏ.7 ರಂದು ಜಾನುವಾರು ಹಾಗೂ ಬೆಳೆ ಸಮೇತ ಶಾಸಕರ ಮನೆ ಮುಂದೆ ಹೋರಾಟ ಮಾಡಲಾಗುವುದು ಎಂದರು.ರಾಜ್ಯ ಮುಖಂಡ ಬಂಗಾವಾದಿ ನಾಗರಾಜ ಗೌಡ, ಸುಪ್ರೀಂ ಚಲ ಜಿಲ್ಲಾಧ್ಯಕ್ಷ ಈಕಂಬಹಳ್ಳಿ, ಮಂಜುನಾಥ್, ತಿಮ್ಮಣ್ಣ, ಹರೀಶ್, ರೂಪೇಶ್, ಮಾ.ವೆ.ಪ್ರಕಾಶ್ ಇದ್ದರು.