ಸಾರಾಂಶ
ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಬೇಡ್ತಿ- ವರದಾ ನದಿ ಜೋಡಣೆ ಯೋಜನೆಗೆ ಅನುಮೋದಿಸುವಂತೆ ಹಾಗೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಗ್ರಹಿಸಿ ಜಿಲ್ಲೆಯ ಶಾಸಕರ ಮೇಲೆ ಒತ್ತಡ ಹಾಕಲು ಮಾ. 6ರಂದು ಜಿಲ್ಲೆಯ ಎಲ್ಲ ಶಾಸಕರ ಮನೆ ಎದುರು ಧರಣಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ರೈತರು ಸಮಗ್ರ ನೀರಾವರಿ ಸೌಲಭ್ಯ ಪಡೆದುಕೊಳ್ಳಲು ಬೇಡ್ತಿ- ವರದಾ ನದಿ ಜೋಡಣೆ ಅವಶ್ಯಕವಾಗಿದೆ. ಕೇಂದ್ರ ಸರ್ಕಾರದ ಜಲನೀತಿ ಅನ್ವಯ ವರದಾ- ಬೇಡ್ತಿ ನದಿ ಜೋಡಣೆ ಪ್ರಸ್ತಾಪ ಸರ್ಕಾರದ ಮುಂದಿದೆ. 2003ರಲ್ಲಿಯೇ ಕೇಂದ್ರದ ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ ಅಧ್ಯಯನ ನಡೆಸಿ ಯೋಜನೆ ಸರಿಯಾಗಿದೆ ಎಂದು ಪ್ರಸ್ತಾಪಿಸಿದೆ. 2011ರಲ್ಲಿ ರಾಜ್ಯ ಸರ್ಕಾರ ಮುಂಗಡ ಪತ್ರದಲ್ಲಿ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸಲು ಸೂಚಿಸಿದೆ. ಆದರೂ ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿಲ್ಲ ಎಂದರು.ಬೇಡ್ತಿ- ವರದಾ ನದಿಗಳ ಜೋಡಣೆಯಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ 6 ಜಿಲ್ಲೆಗಳ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಇದರಿಂದ ಹಾವೇರಿ ಜಿಲ್ಲೆ ಸಂಪೂರ್ಣ ನೀರಾವರಿಯಾಗಲಿದ್ದು, ಒಟ್ಟು 16 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರೊದಗಿಸುವ ಶಕ್ತಿ ಇದಕ್ಕಿದೆ. ಎಲ್ಲ ಪಟ್ಟಣ, ಹಳ್ಳಿಗಳಿಗೂ ಕುಡಿಯುವ ನೀರು ಪೂರೈಸುವ ಶಕ್ತಿಯನ್ನು ಹೊಂದಿದೆ. ಅಂತರ್ಜಲ ಮಟ್ಟವನ್ನೂ ಹೆಚ್ಚಿಸಲಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದರು.ಈ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರೈತ ಸಂಘ ನಿರಂತರ ಹೋರಾಟದಲ್ಲಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗಿದೆ. ಇದಕ್ಕೆ ಜಿಲ್ಲೆಯ ಎಲ್ಲ ಶಾಸಕರು, ಉಸ್ತುವಾರಿ ಸಚಿವರು, ಸಂಸದರು ಸ್ಪಂದಿಸಿ ಯೋಜನೆ ಸಾಕಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಅದರಂತೆ ಬಜೆಟ್ ಅಧಿವೇಶನದಲ್ಲಿ ಮತ್ತೊಮ್ಮೆ ಜಿಲ್ಲೆಯ ಎಲ್ಲ ಶಾಸಕರು ಸರ್ಕಾರಕ್ಕೆ ಒತ್ತಡ ಹಾಕಿಸಲು ಆಗ್ರಹಿಸಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿದರು. ರೈತ ಮುಖಂಡರಾದ ಮರಿಗೌಡ ಪಾಟೀಲ, ಸುರೇಶ ಚಲವಾದಿ, ಸೋಮಣ್ಣ ಜಡೆಗೊಂಡರ, ರುದ್ರಪ್ಪ ಅಣ್ಣಿ, ಮಲ್ಲನಗೌಡ ಮಾಳಗಿ, ಶಿವಯೋಗಿ ಹೊಸಗೌಡ್ರ, ವಿರುಪಾಕ್ಷಪ್ಪ ಗುಡಗೂರ, ಮಹದೇವಪ್ಪ ಬಣಕಾರ, ರವಿ ಅಂಗಡಿ, ನಂದೀಶ ಮಾಳಗಿ, ಮಲ್ಲಿಕಾರ್ಜುನ ಸತಗಿಹಳ್ಳಿ ಇದ್ದರು.