ಸಾರಾಂಶ
ಕಳೆದ 9 ವರ್ಷದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೀತಿಗಳು ಕೋಟ್ಯಂತರ ಕಾರ್ಮಿಕರು, ರೈತರು ಹಾಗೂ ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ
ಅಂಕೋಲಾ: ಕಳೆದ 9 ವರ್ಷದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೀತಿಗಳು ಕೋಟ್ಯಂತರ ಕಾರ್ಮಿಕರು, ರೈತರು ಹಾಗೂ ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಜ. ೨೩ರಿಂದ ೨೫ರ ವರೆಗೆ ರಾಜ್ಯದ ಎಲ್ಲ ಸಂಸದರ ಮನೆ ಎದುರು ಪ್ರತಿಭಟನೆಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ರಾಜ್ಯ ಸಮಿತಿ ಕರೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಈ ಕರೆ ಯಶಸ್ವಿಗೊಳಿಸಲು ಅಂಕೋಲಾದಲ್ಲಿ ಸಭೆ ಸೇರಿದ ಜಿಲ್ಲಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲಾಧ್ಯಕ್ಷ ತಿಲಕ ಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿಗಳಾದ ಯಮುನಾ ಗಾಂವ್ಕರ ಹೋರಾಟದ ನಿರ್ಣಯ ಮಂಡಿಸಿದರು.
ಸ್ಕೀಮ್ ನೌಕರರು, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಈ ಹೋರಾಟದಲ್ಲಿ ಪಾಲ್ಗೊಳ್ಳುವರು. ಕೇಂದ್ರ ಸರ್ಕಾರವು ಜಾರಿ ಮಾಡಿದ ಕಾರ್ಮಿಕ ಕಾನೂನು ತಿದ್ದುಪಡಿ ಹಾಗೂ ಸುಗ್ರೀವಾಜ್ಞೆ ವಾಪಸ್ ಪಡೆಯಬೇಕು. ಕೆಲಸದ ಅವಧಿ ವಿಸ್ತರಣೆ, ಕನಿಷ್ಠ ವೇತನ ಪರಿಷ್ಕರಣೆ, ಕೈಗಾರಿಕಾ ಕಾಯ್ದೆಯಲ್ಲಿನ ತಿದ್ದುಪಡಿ ಮುಂತಾದ ಕಾರ್ಮಿಕ ವಿರೋಧಿ ಕ್ರಮ ಹಿಂಪಡಿಯಬೇಕು, ವಿದ್ಯುತ್ ಕ್ಷೇತ್ರದ ಖಾಸಗೀಕರಣ ನಿಲ್ಲಿಸಬೇಕೆಂದು ಒತ್ತಾಯಿಸಲಾಗುತ್ತದೆ.
ಸಹಿ ಸಂಗ್ರಹ: ಯೋಜನಾ ಕಾರ್ಮಿಕರು, ಸಂಘಟಿತ, ಅಸಂಘಟಿತ ಹಾಗೂ ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರ ಬೇಡಿಕೆಗ ಮೇಲೆ ಜ. ೧೨ರಿಂದ ಸಹಿ ಸಂಗ್ರಹ ಚಳವಳಿ ನಡೆಸಲಾಗುತ್ತದೆ. ಅಂದು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲೂ ಒಂದು ತಿಂಗಳು ಸಹಿ ಸಂಗ್ರಹಿಸಲಾಗುವುದು. ಪ್ರಧಾನಿಗೆ ಲಕ್ಷಾಂತರ ಸಹಿಗಳುಳ್ಳ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳಾದ ಶಾಂತಾರಾಮ ನಾಯಕ, ಸಲಿಂ ಸೈಯದ್, ಜಗದೀಶ ನಾಯ್ಕ, ಜಯಶ್ರೀ ಹಿರೇಕರ, ಗೀತಾ ನಾಯ್ಕ ಭಟ್ಕಳ, ಎಚ್.ಬಿ. ನಾಯಕ, ಲಲಿತಾ ಹೆಗಡೆ, ಮಾಯಾ ಕಾಣೇಕರ, ಹನುಮಂತ ಸಿಂದೋಗಿ, ಮಂಜುನಾಥ ಗೌಡ ಭಾಗವಹಿಸಿದ್ದರು.