ರಾಮಪುರ ಪೊಲೀಸ್ ಠಾಣಾ ಮುಂಭಾಗ ಪ್ರತಿಭಟನೆ

| Published : Sep 13 2024, 01:31 AM IST

ಸಾರಾಂಶ

ಹನೂರು ರಾಮಪುರ ಪೊಲೀಸ್ ಠಾಣಾ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರೈತ ಮುಖಂಡರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ಪೊಲೀಸ್ ಅಧಿಕಾರಿ ಏಕವಚನದಲ್ಲಿ ರೈತ ಮುಖಂಡರನ್ನು ನಿಂದಿಸಿದ್ದಾರೆ ಎಂದು ರಾಮಪುರ ಪೊಲೀಸ್ ಠಾಣಾ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ರಾಮಪುರ ಪೊಲೀಸ್ ಠಾಣಾ ಸರಹದ್ದಿನ ಪಚ್ಚೆದೊಡ್ಡಿ ಗ್ರಾಮದ ಜಮೀನೊಂದರ ವಿಚಾರವಾಗಿ ತಾಲೂಕು ಘಟಕದ ಅಧ್ಯಕ್ಷ ಅಮ್ಜಾದ್ ಖಾನ್ ಅವರನ್ನು ರಾಮಪುರ ಪಿಎಸ್ಐ ಈಶ್ವರ್ ಪ್ರಕರಣ ಸಂಬಂಧಿಸಿದಂತೆ ವಿಚಾರ ಮಾಡಲು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ಹಿರಿಯಾಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಒತ್ತಾಯಿಸಿದ್ದರು.ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಶಶಿಕುಮಾರ್ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದಾಗ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೆ ಗೌಡ ಮಾತನಾಡಿ, ಜನಸ್ನೇಹಿ ಪೊಲೀಸರಾಗಿ ಕೆಲಸ ನಿರ್ವಹಿಸಬೇಕಾದ ಅಧಿಕಾರಿ ಸಾರ್ವಜನಿಕರ ಜತೆ ಗೌರವಯುತವಾಗಿ ನಡೆದುಕೊಳ್ಳಬೇಕಾದವರು ಏಕವಚನದಲ್ಲಿ ತಾಲೂಕು ಘಟಕದ ಅಧ್ಯಕ್ಷರನ್ನು ನಿಂದಿಸಿದ್ದಾರೆ. ಬಂಡವಾಳ ಶಾಹಿಗಳ ಪರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳೆಯನ್ನು ಸಹ ಈ ಪ್ರಕರಣದಲ್ಲಿ ಸಿಲುಕಿಸಿ ಏಕವಚನದಲ್ಲಿ ನಿಂದಿಸಿದ್ದಾರೆ. ಪಚ್ಚೆದೊಡ್ಡಿ ಗ್ರಾಮದಲ್ಲಿ ಬಂಡವಾಳ ಶಾಹಿ ಜಮೀನು ಖರೀದಿಸಿ ಅಕ್ಕ ಪಕ್ಕದಲ್ಲಿರುವ ರೈತರಿಗೆ ದಾರಿಯ ತೊಂದರೆ ನೀಡುತ್ತಿದ್ದು ಗ್ರಾಮಸ್ಥರಿಗೆ ಸಹಕಾರ ನೀಡಬೇಕಾದ ಅಧಿಕಾರಿ ಇಂತಹ ವ್ಯಕ್ತಿಗಳ ಬಗ್ಗೆ ನಿಂತಿರುವುದು ಕಾನೂನುಬಾಹಿರ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಹೀಗಾಗಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ಬಂಧಿಸಿದರೆ ಎಲ್ಲರನ್ನೂ ಬಂಧಿಸಿ ಇಲ್ಲದಿದ್ದರೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಇನ್ಸ್‌ಪೆಕ್ಟರ್ ಶಶಿಕುಮಾರ್ ಮಾತನಾಡಿ, ಒತ್ತಡದ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಇಂತಹ ಸಣ್ಣಪುಟ್ಟ ವ್ಯತ್ಯಾಸಗಳು ಆಗುತ್ತದೆ. ಅವರು ಈ ತರಹ ಮಾತನಾಡುವ ಅಧಿಕಾರಿ ಅಲ್ಲ. ಹೀಗಾಗಿ ಇಂತಹ ಘಟನೆಗಳಿಗೆ ಅವಕಾಶ ನೀಡದೆ ಜಮೀನು ವಿಚಾರವಾಗಿ ನೀಡಿರುವ ಪ್ರಕರಣದ ಬಗ್ಗೆ ಕೂಲಂಕುಶವಾಗಿ ವಿಚಾರ ಮಾಡಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಪ್ರತಿಭಟನೆಯನ್ನು ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.ಇದೇ ಸಂದರ್ಭದಲ್ಲಿ ಶೈಲಿಂದ ಕುಮಾರ್, ತಾಲೂಕು ಘಟಕದ ಅಧ್ಯಕ್ಷ ಅಮ್ಜಾದ್ ಖಾನ್, ರವಿ ನಾಯ್ಡು, ಸಂತೋಷಿ, ರಾಜಣ್ಣ ಬಸವರಾಜ್, ಪೆರಿಯ ನಾಯಗಂ, ಪೋಂಗುಡಿ ಮರಿಯಮ್ಮ, ಶಿವಣ್ಣ ಇನ್ನಿತರ ರೈತ ಮುಖಂಡರು ಇದ್ದರು.