ಸಾರಾಂಶ
ಕಲೆ, ಸಾಹಿತ್ಯ, ಸಂಗೀತ, ಪರಂಪರೆಗೆ ಹೆಸರುವಾಸಿಯಾಗಿರುವ ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ ಪತ್ತೆಯಾಗಿರುವುದು ಆತಂಕ
ಕನ್ನಡಪ್ರಭ ವಾರ್ತೆ ಮೈಸೂರು
ನಗರದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾ ಪ್ರಕರಣ ಕುರಿತು ತನಿಖೆ ನಡೆಸಿ, ಕಾಣದ ಕೈಗಳನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾದವರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟಿಸಿದರು.ಕಲೆ, ಸಾಹಿತ್ಯ, ಸಂಗೀತ, ಪರಂಪರೆಗೆ ಹೆಸರುವಾಸಿಯಾಗಿರುವ ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ ಪತ್ತೆಯಾಗಿರುವುದು ಆತಂಕಕಾರಿಯಾಗಿದೆ. ಮೈಸೂರಿನಿಂದ ಬೇರೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡಲು ಡ್ರಗ್ಸ್ ಉತ್ಪಾದನೆ ಮಾಡಲಾಗುತ್ತಿತ್ತು ಎನ್ನುವ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು. ಮಾದಕ ದ್ರವ್ಯವನ್ನು ಉತ್ಪಾದನೆ ಮಾಡಿ ದೇಶವನ್ನು ಹಾಳು ಮಾಡುತ್ತಿರುವ ವ್ಯಕ್ತಿಗಳು ದೇಶದ್ರೋಹದ ಕೆಲಸ ಮಾಡಲು ಮುಂದಾಗಿದ್ದಾರೆ. ಮುಂಬೈ, ಗುಜರಾತ್, ಬೆಂಗಳೂರು, ಮಹಾರಾಷ್ಟ್ರ ಇನ್ನಿತರ ರಾಜ್ಯಗಳಿಗೆ ಡ್ರಗ್ಸ್ ಹಂಚುತ್ತಿರುವ ಮೂಲ ಜಾಲವನ್ನು ಪತ್ತೆ ಹಚ್ಚಬೇಕು. ಮುಂಬೈ ಪೊಲೀಸರು ಮೈಸೂರಿಗೆ ಬಂದು ಜಾಲವನ್ನು ಪತ್ತೆ ಹೆಚ್ಚಿದ್ದಾರೆ. ಇದನ್ನು ನೋಡಿದರೆ ಗೃಹ ಇಲಾಖೆ ಹಾಗೂ ನಗರ ಪೊಲೀಸರ ವೈಫಲ್ಯತೆ ಕಾಣಿಸುತ್ತದೆ. ಕಾನೂನು ಸುವ್ಯವಸ್ಥೆ ಹಾಗೂ ದೇಶದ್ರೋಹಿ ಕೃತ್ಯಗಳನ್ನು ತಡೆಯಲು ವಿಫಲವಾಗಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.ಯುವ ಮೋರ್ಚಾ ನಗರಾಧ್ಯಕ್ಷ ರಾಕೇಶ್ ಗೌಡ, ಮುಖಂಡರಾದ ಎಚ್.ಜಿ. ಗಿರಿಧರ್, ಬಿ.ಎಂ. ರಘು, ಎಂ.ವಿ. ಮೋಹನ್, ಹೇಮಂತ್ ಕುಮಾರ್ ಗೌಡ, ಬಿ.ಪಿ. ಮಂಜುನಾಥ್, ಜೋಗಿ ಮಂಜು, ಎಂ.ಜೆ. ಕಿರಣ್ ಗೌಡ, ಗೋಪಾಲ್ ರಾವ್, ಭರತ್, ರಾಕೇಶ್ ಭಟ್, ಕೃಷ್ಣನಾಯಕ, ಜಯರಾಮ್, ಮಹೇಶ್ ರಾಜೇ ಅರಸ್, ನಿಶಾಂತ್ ಮೊದಲಾದವರು ಇದ್ದರು.