ಗ್ರಾಮದ ಸರ್ವೇ ನಂ. 74ರಲ್ಲಿ 1 ಎಕರೆ 36 ಗುಂಟೆ ನಮ್ಮ ತಾತ ಕಾಳೇಗೌಡ ಅವರಿಗೆ ಸೇರಿದ್ದ ಜಮೀನಿನಲ್ಲಿ ಸುಮಾರು 50ಕ್ಕೂ ಹೆಚ್ಚು ವರ್ಷಗಳಿಂದ ಉಳುಮೆ ಮಾಡಿ, ಜೀವನ ನಡೆಸುತ್ತಿದ್ದು, ನಮ್ಮ ಜಮೀನನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿ ಪಹಣಿ ಕೂರಿಸಲು ರಘು ಕಾರಣರಾಗಿದ್ದು, ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕಳೆದ 50 ವರ್ಷದಿಂದ ವ್ಯವಸಾಯ ಮಾಡಿಕೊಂಡು, ಅನುಭವದಲ್ಲಿದ್ದ ಜಮೀನನ್ನು ಅನ್ಯರ ಹೆಸರಿಗೆ ಪಹಣಿ ಮಾಡಲು ಹುಲಿಕೆರೆ ಗ್ರಾಮಲೆಕ್ಕಿಗ ರಘು ಎಂಬುವವರು ಸಹಕರಿಸಿದ್ದಾರೆ ಎಂದು ಆರೋಪಿಸಿ ಬೆಳಗೊಳ ನಾಡ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಾಲೂಕಿನ ಹುಲಿಕೆರೆ ಗ್ರಾಮದ ಜಗದೀಶ್ ಕುಟುಂಬಸ್ಥರು ಬೆಳಗೊಳ ನಾಡಕಚೇರಿ ಎದುರು ಜಮಾವಣೆಗೊಂಡು ಗ್ರಾಮಲೆಕ್ಕಿಗ ರಘು ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.

ಗ್ರಾಮದ ಸರ್ವೇ ನಂ. 74ರಲ್ಲಿ 1 ಎಕರೆ 36 ಗುಂಟೆ ನಮ್ಮ ತಾತ ಕಾಳೇಗೌಡ ಅವರಿಗೆ ಸೇರಿದ್ದ ಜಮೀನಿನಲ್ಲಿ ಸುಮಾರು 50ಕ್ಕೂ ಹೆಚ್ಚು ವರ್ಷಗಳಿಂದ ಉಳುಮೆ ಮಾಡಿ, ಜೀವನ ನಡೆಸುತ್ತಿದ್ದು, ನಮ್ಮ ಜಮೀನನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿ ಪಹಣಿ ಕೂರಿಸಲು ರಘು ಕಾರಣರಾಗಿದ್ದು, ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಕೆಲ ತಪ್ಪಿನಿಂದ ಕಾಳೇಗೌಡ ಅವರ ಹೆಸರಿನಲ್ಲಿದ್ದ ಜಮೀನು ನರಸಮ್ಮ ಎಂದು ಪಹಣಿಯಲ್ಲಿ ನಮೂದಾಗಿದ್ದು, ಅದನ್ನು ಸರಿಪಡಿಸಲು ಅಗತ್ಯ ದಾಖಲೆ ಸಮೇತ ಉಪವಿಭಾಗಾಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಕುರಿತ ಶ್ರೀರಂಗಪಟ್ಟಣ ತಹಸೀಲ್ದಾರ್ ನ್ಯಾಯಾಲಯದಲ್ಲಿ ದಾವೆ ಇದೆ. ಈ ವಿಷಯವನ್ನು ಗ್ರಾಮ ಲೆಕ್ಕಿಗ ರಘು ಅವರಿಗೆ ತಿಳಿಸಿದ್ದರೂ ಸಹ ರಘು ಅವರು, ಪೌತಿಯಾಗಿರುವ ನರಸಮ್ಮ ಎಂಬುವವರ ಕುಟುಂಬಸ್ಥರಿಗೆ ಖಾತೆ ಮಾಡಿಸಲು ಮುಂದಾಗಿದ್ದಾರೆ. ಕೂಡಲೇ ಅಕ್ರಮ ಖಾತೆ ಮಾಡಿಕೊಡಲು ಮುಂದಾಗಿದ್ದ ಅವರ ವಿರುದ್ಧ ಕಾನೂನು ಕ್ರಮ ಹಾಗೂ ಕೈತಪ್ಪಿನಿಂದಾಗಿರುವ ನರಸಮ್ಮ ಹೆಸರಿನ ಖಾತೆ ರದ್ದು ಪಡಿಸುವಂತೆ ಒತ್ತಾಯಿಸಿದರು.

ಈ ವೇಳೆ ಗ್ರಾಮದ ಲೋಕೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಚಲುವರಾಜು, ಬೆಳಗೊಳ ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ. ಸುರೇಶ್, ರ್‍ಯಾಂಬೋ ರವಿ ಸೇರಿ ಜಗದೀಶ್ ಕುಟುಂಬಸ್ಥರು ಪ್ರತಿಭಟನೆಯಲ್ಲಿ ಇದ್ದರು.