ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

| Published : Jun 23 2024, 02:04 AM IST

ಸಾರಾಂಶ

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗಜೇಂದ್ರಗಡ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಮರೆತಿರುವ ಪರಿಣಾಮ ರಾಜ್ಯವು ೨೦ ವರ್ಷಗಳ ಅಭಿವೃದ್ಧಿ ಹಿನ್ನಡೆ ಅನುಭವಿಸುವಂತಾಗಿದೆ. ಅಲ್ಲದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಕಾಂಗ್ರೆಸ್ ಮುದ್ರಾಂಕ ಸೇರಿ ಒಂದಿಲ್ಲೊಂದು ಬೆಲೆ ಏರಿಕೆ ಮಾಡುವ ಮೂಲಕ ಜನತೆಯನ್ನು ಸಂಕಷ್ಟಕ್ಕೆ ದೂಡುತ್ತಾ ಬರುತ್ತಿದೆ. ಈಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸುತ್ತಿದೆ. ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ದರ ಹೆಚ್ಚಿಸಲು ಮುಂದಾಗಿದ್ದು, ಅದರಲೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ಇದು ಸರಿಯಾದ ಕ್ರಮವಲ್ಲ ಎಂದು ದೂರಿದರು.ಕಾಂಗ್ರೆಸ್ ಬಡಜನರ ಬದುಕಿನ ಜತೆಗೆ ಚೆಲ್ಲಾಟವಾಡುತ್ತಿದೆ. ಬೆಲೆ ಏರಿಕೆ ನೀತಿಗೆ ಜನತೆ ರೋಸಿ ಹೋಗಿದ್ದಾರೆ. ತೈಲ ದರ ಏರಿಕೆಯಿಂದ ವಾಹನ ಸವಾರರಿಗೆ ಮಾತ್ರವಲ್ಲ, ಸರಕು ಸಾಗಾಣಿಕೆ ಮೇಲೂ ಪರಿಣಾಮ ಬೀರುವುದು. ಇದರ ಜತೆಗೆ ಪ್ರಯಾಣದ ದರವೂ ಹೆಚ್ಚಲಿದೆ. ಕೂಡಲೇ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಸಚಿವ ಕಳಕಪ್ಪ ಬಂಡಿ ಗೃಹ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಕಾಲಕಾಲೇಶ್ವರ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತ್ತು. ಮಾರ್ಗದುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಮುತ್ತಣ್ಣ ಕಡಗದ, ರಾಜೇಂದ್ರ ಘೋರ್ಪಡೆ, ಸಿದ್ದಣ್ಣ ಬಳಿಗೇರ, ವೀರಪ್ಪ ಪಟ್ಟಣಶೆಟ್ಟಿ, ಕನಕಪ್ಪ ಅರಳಿಗಿಡದ, ಸುಭಾಸ ಮ್ಯಾಗೇರಿ, ಮುದಿಯಪ್ಪ ಮುಧೋಳ, ಉಮೇಶ ಚನ್ನುಪಾಟೀಲ, ದುರಗಪ್ಪ ಮುಧೋಳ, ಯು.ಆರ್. ಚನ್ನಮ್ಮನವರ, ಬಾಲಾಜಿ ಬೊಸ್ಲೆ, ಉಮೇಶ ಮಲ್ಲಾಪುರ, ಶ್ರೀನಿವಾಸ ಸವದಿ, ಶಂಕರ ಇಂಜನಿ, ರವಿ ಶಿಂಗ್ರಿ, ವಿಶ್ವನಾಥ ಕುಷ್ಟಗಿ, ಶಿವಾನಂದ ಅರಳಿ, ಡಿ.ಜಿ. ಕಟ್ಟಿಮನಿ ಇದ್ದರು.