ಕಲಬುರಗಿ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಕನಕದಾಸ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ಗಂಗಾವತಿಯ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಗಂಗಾವತಿ: ಕಲಬುರಗಿ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಕನಕದಾಸ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕೊಪ್ಪಳ ರಸ್ತೆಯ ವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದ ವರೆಗೂ ಬೈಕ್ ರ್ಯಾಲಿ ನಡೆಸಿದ ಕಾರ್ಯಕರ್ತರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಯಮನಪ್ಪ ವಿಠಲಾಪುರ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕರು. ಅಲ್ಲದೇ ರಾಜ್ಯದಲ್ಲಿ 8 ವರ್ಷ ಮುಖ್ಯಮಂತ್ರಿಯಾಗಿ ಅಭಿವೃದ್ಧಿ ಮಾಡಿದ ಏಕೈಕ ಮುಖ್ಯಮಂತ್ರಿ. ಅಂತಹ ನಾಯಕರ ಪ್ರತಿಮೆ ತೆರವುಗೊಳಿಸಿರುವುದು ಖಂಡನೀಯ ಎಂದರು.

ಕೂಡಲೆ ಮಹಾನಗರ ಪಾಲಿಕೆಯವರು ಸಿದ್ದರಾಮಯ್ಯ ಪ್ರತಿಮೆ ಪುನರ್ ಸ್ಥಾಪಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾತನಾಡಿ, ಪ್ರತಿಮೆ ತೆರವಿನಿಂದ ಕೇವಲ ಸಿದ್ದರಾಮಯ್ಯ ಅವರಿಗೆ ಅನ್ಯಾಯವಾಗಿಲ್ಲ, ಇಡೀ ರಾಜ್ಯದ ಹಾಲುಮತ ಸಮಾಜದ ಜತೆ ಹಿಂದುಳಿದ ಜನಾಂಗಕ್ಕೆ ಅನ್ಯಾಯವಾಗಿದೆ. ಕೂಡಲೆ ಸರ್ಕಾರ ಮುತುವರ್ಜಿ ವಹಿಸಿ ಪ್ರತಿಮೆ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಕೆ. ನಾಗೇಶಪ್ಪ ಮಾತನಾಡಿ, ಸಿದ್ದರಾಮಯ್ಯ ರಾಜ್ಯ ಕಂಡ ಅಪ್ರತಿಮನಾಯಕ. ಅಂತಹ ಮಹಾನ್ ನಾಯಕರ ಪ್ರತಿಮೆ ತೆರವು ಹಿಂದುಳಿದ ಜನರನ್ನು ಕೆರಳಿಸಿದೆ. ಕಾಣದ ಕೈಗಳ ಕೈವಾಡ ಇದೆ ಎಂದು ಭಾವುಕರಾಗಿ ಮಾತನಾಡಿದರು.

ಕಲಬುರಗಿ ಚಲೋ ಪ್ರಾರಂಭವಾಗುವುದಕ್ಕಿಂತ ಪೂರ್ವದಲ್ಲಿ ಸಿದ್ದರಾಮಯ್ಯ ಪ್ರತಿಮೆ ಅನಾವರಣಗೊಳ್ಳಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ನಗರಸಭೆ ಮಾಜಿ ಅಧ್ಯಕ್ಷ ಕೆ. ವೆಂಕಟೇಶ, ಗೌಡಪ್ಪ ಗೌಡ, ಹನುಮಂತಪ್ಪ ಗಡ್ಡಿ, ಮುದಕಪ್ಪ ಗಡ್ಡಿ, ಬಸವರಾಜ್ ಉಪ್ಪಿನಮಾಳಿ ಕ್ಯಾಂಪ್, ಅಶೋಕಗೌಡ, ಕೆ. ನಿಂಗಜ್ಜ, ಶರಣಪ್ಪ, ತೇವರಪ್ಪ ಆಡಿನ್, ಮುದಿಯಪ್ಪ ಕುರಿ, ಪರುಶರಾಮ ಇಟಗಿ, ಧರ್ಮಣ್ಣ ಆಡಿನ್, ಹನುಮಂತಪ್ಪ ಗಿಡ್ಡಿ, ಡ್ಯಾಗಿ ರುದ್ರೇಶ, ಅಡ್ಡಿ ಶಾಮಣ್ಣ, ಲಿಂಗಪ್ಪ ಕಂಪ್ಲಿ, ನರಸಪ್ಪ ಕಂಪ್ಲಿ, ದುರಗಪ್ಪ ಮೋರಿ, ನೀಲಕಂಠಪ್ಪ ದೇವಮರಮನಿ ಭಾಗವಹಿಸಿದ್ದರು.