ವಾರದ ಐದು ದಿನಗಳ ಕಾಲ ಮಾತ್ರ ಕೆಲಸದ ಅವಧಿ ಎಂದು ಪರಿಗಣಿಸಿ ಆದೇಶಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ದೇಶವ್ಯಾಪಿ ಯುನೈಟೆಡ್ ಪೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ಮೇರೆಗೆ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿ ಮಂಗಳವಾರ ಕೆಲಸದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.

ಹಾವೇರಿ: ವಾರದ ಐದು ದಿನಗಳ ಕಾಲ ಮಾತ್ರ ಕೆಲಸದ ಅವಧಿ ಎಂದು ಪರಿಗಣಿಸಿ ಆದೇಶಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ದೇಶವ್ಯಾಪಿ ಯುನೈಟೆಡ್ ಪೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ಮೇರೆಗೆ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿ ಮಂಗಳವಾರ ಕೆಲಸದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.ನಗರದ ಹಾನಗಲ್ಲ ರಸ್ತೆಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಿಂದ ಪ್ರತಿಭಟನೆ ಆರಂಭಿಸಿದ ಬ್ಯಾಂಕ್ ಸಿಬ್ಬಂದಿ, ಹಾನಗಲ್ ರಸ್ತೆಯ ಎಪಿಎಂಸಿ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತ ತಲುಪಿ ಮತ್ತೆ ಅದೇ ಮಾರ್ಗವಾಗಿ ಹಿಂದಿರುಗಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಗೆ ಪ್ರತಿಭಟನೆಯನ್ನು ಸಂಪನ್ನಗೊಳಿಸಿದರು.ಇಂಡಿಯನ್ ಬ್ಯಾಂಕರ್ಸ ಅಸೋಸಿಯೇಷನ್ (ಐಬಿಎ) ಜತೆಗೆ 2022ರಲ್ಲಿ ನಡೆದ ಒಪ್ಪಂದದಂತೆ ಕೇಂದ್ರ ಸರ್ಕಾರ ಬ್ಯಾಂಕರ್ಸಗಳಿಗೆ ವಾರದ ಐದು ದಿನ ಮಾತ್ರ ಕೆಲಸದ ಅವಧಿ ಎಂದು ಪರಿಗಣಿಸಿ ಅಧಿಕೃತವಾಗಿ ಆದೇಶಿಸಬೇಕು ಎಂಬ ಪ್ರಮುಖ ಬೇಡಿಕೆಯನ್ನು ಮಂಡಿಸಿದರು. ಈಗಾಗಲೇ ವಾರದ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಬ್ಯಾಂಕರ್ಸ್‌ಗಳಿಗೆ ರಜೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದು, ಮೊದಲ ಮತ್ತು ಮೂರನೇ ಶನಿವಾರ ಪೂರ್ಣದಿನದ ಕೆಲಸದ ಹೊರೆಯಿಂದ ಬಳಲುತ್ತಿದ್ದೇವೆ. ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಬ್ಯಾಂಕರ್ಸಗ ಳಿಗೆ ವಿವಿಧ ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ವಾರಕ್ಕೆ ಐದು ದಿನ ಮಾತ್ರ ಕೆಲಸದ ದಿನಗಳು ಎಂದು ಆದೇಶಿಸುವಂತೆ ಘೋಷಣೆ ಕೂಗಿ ಒತ್ತಾಯಿಸಿದರು.ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆರ್‌ಬಿಐ, ಎಲ್‌ಐಸಿ ಮತ್ತು ಜನರಲ್ ಇನ್ಷೂರೆನ್ಸ್ ಸಂಸ್ಥೆಗಳು, ಶೇರು ಮಾರುಕಟ್ಟೆಗಳು ಮತ್ತು ವಿವಿಧ ಹಣಕಾಸು ಮಾರುಕಟ್ಟೆ ಮತ್ತು ಸಂಸ್ಥೆಗಳು ಸೋಮವಾರದಿಂದ ಶುಕ್ರವಾರದವರೆಗೆ, ವಾರದ ಐದು ದಿನ ಮಾತ್ರ ಕೆಲಸ ನಿರ್ವಹಿಸುತ್ತಿವೆ. ಆದರೆ ಬ್ಯಾಂಕರುಗಳು ಮಾತ್ರ ಎರಡು ಶನಿವಾರಗಳಂದು ಪೂರ್ಣ ದಿನದ ಕೆಲಸ ಮಾಡಬೇಕಿದೆ. ಕಾರಣ ಬ್ಯಾಂಕರ್‌ಗಳಿಗೂ ವಾರದ ಐದು ದಿನ ಮಾತ್ರ ಕೆಲಸ ಅವಧಿ ಎಂದು ಘೋಷಣೆ ಮಾಡಿ ಆದೇಶಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್, ಸರ್ಕಾರಿ ಬ್ಯಾಂಕ್, ಖಾಸಗಿ, ವಿದೇಶಿ, ಪ್ರಾದೇಶಿಕ, ಗ್ರಾಮೀಣ ಹಾಗೂ ಸಹಕಾರಿ ಸಂಘಗಳ ಎಲ್ಲಾ ಹಂತದ 200ಕ್ಕೂ ಹೆಚ್ಚು ಬ್ಯಾಂಕಿಂಗ್ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಪ್ರತಿಭಟನೆಯಲ್ಲಿ ಶಶಿಶೇಖರ, ಕುಮಾರ ಚೌಟಗಿ, ಪವನ ಹೊಸಂಗಡಿ, ನಾಗೇಂದ್ರ, ಹರ್ಷ ವೆಲ್ಲೂರ, ಇಮಾಮ ದಿಡಗೂರ, ಶ್ರೀಕಾಂತ ಪಾಟೀಲ, ಮಹೇಶ ಕುಮಾರ ಎ.ಕೆ., ಸೂಷ್ಮಾ ಗಾಯಕ್ವಾಡ, ಚೈತನ್ಯ, ಕುಮಾರ ಗಚ್ಚಿನವರ, ಪ್ರದೀಪ ಹೂಲಿಹಳ್ಳಿ ಸೇರಿದಂತೆ ಹಲವರು ಇದ್ದರು.