ನೇಹಾ ಹತ್ಯೆ ಖಂಡಿಸಿ ಹೊನ್ನಾವರದಲ್ಲಿ ಪ್ರತಿಭಟನೆ

| Published : Apr 24 2024, 02:25 AM IST / Updated: Apr 24 2024, 02:26 AM IST

ಸಾರಾಂಶ

ಮುಂದಿನ ದಿನಗಳಲ್ಲಿ ಇಂತಹ ಘೋರ ಕೃತ್ಯಗಳು ಮರುಕಳಿಸದೇ ಇರುವ ಹಾಗೆ ಕ್ರಮ ಕೈಗೊಳ್ಳಬೇಕೆಂಬುದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಹೊನ್ನಾವರ: ಹುಬ್ಬಳ್ಳಿಯಲ್ಲಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಖಂಡಿಸಿ ತಾಲೂಕಿನ ಹಿಂದೂಪರ ಸಂಘಟನೆಗಳ ಹಾಗೂ ಬಿಜೆಪಿ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಮತಕ್ಕಾಗಿ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತ ಬಹುಸಂಖ್ಯಾತ ಹಿಂದೂಗಳನ್ನು ತುಳಿಯುವ ಕೆಲಸ ಮಾಡುತ್ತಿದೆ. ಹಿಂದೂ ಸಮಾಜ ಜಾಗ್ರತವಾಗಿದೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವ ವಿಚಾರಗಳಿಗೆ ಹಿಂದೂಗಳು ಒಟ್ಟಾಗಿ ಹೋರಾಡುವ ಕಾಲ ಬಂದಿದೆ. ಎಷ್ಟು ಹಿಂದೂ ಹೆಣಗಳು ಬಿದ್ದರೂ ಮುಸ್ಲಿಂ ಓಲೈಕೆ ರಾಜಕಾರಣ ಎಂದಿಗೂ ಕಡಿಮೆ ಆಗುತ್ತಿಲ್ಲ. ಇದರ ಫಲ ಭವಿಷ್ಯದಲ್ಲಿ ಸಿಗಲಿದೆ. ಫಯಾಜ್‌ನೇ ಕೊಲೆ ಮಾಡಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದಕ್ಕೆ ಪ್ರತ್ಯೇಕ ಸಾಕ್ಷಿಗಳ ಅವಶ್ಯಕತೆ ಇಲ್ಲ. ತಕ್ಷಣವೇ ಅಂತಹ ಘೋರ ಅಪರಾಧಕ್ಕೆ ಉಗ್ರ ಶಿಕ್ಷೆಯನ್ನು ವಿಧಿಸಬೇಕು. ಇನ್ನು ಮುಂದಿನ ದಿನಗಳಲ್ಲಿ ಇಂತಹ ಘೋರ ಕೃತ್ಯಗಳು ಮರುಕಳಿಸದೇ ಇರುವ ಹಾಗೆ ಕ್ರಮ ಕೈಗೊಳ್ಳಬೇಕೆಂಬುದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ತಹಸೀಲ್ದಾರ್‌ ರವಿರಾಜ ದೀಕ್ಷಿತ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ತಿನ ಮುಖಂಡ ಜೆ.ಟಿ. ಪೈ, ಬಿಜೆಪಿ ಮುಖಂಡರಾದ ಎಂ.ಜಿ. ಭಟ್ ,ಶಿವಾನಂದ ಹೆಗಡೆ ಕಡತೋಕಾ, ಕೇಶವ ನಾಯ್ಕ ಬಳ್ಕೂರ್ ಜಿ.ಜಿ. ಶಂಕರ, ಹರಿಶ್ವಂದ್ರ ನಾಯ್ಕ, ಸಂಜು ಶೇಟ್, ವಿಜು ಕಾಮತ್, ಪಪಂ‌ ಸದಸ್ಯರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಹತ್ಯೆ ಪ್ರಕರಣದ ಉನ್ನತ ತನಿಖೆಯಾಗಲಿ

ಕುಮಟಾ: ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವಾರದಲ್ಲೇ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಫಯಾಜ್ ಎಂಬಾತ ಭೀಕರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಮಂಗಳವಾರ ಕಾಲೇಜು ವಿದ್ಯಾರ್ಥಿಗಳು ತಾಲೂಕು ಸೌಧದ ಎದುರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಮನವಿ ಸಲ್ಲಿಸಿದರು.ಹಾಡಹಗಲಿನಲ್ಲಿ ಕಾಲೇಜು ಆವಾರದಲ್ಲಿ ಎಲ್ಲರೆದುರು ಕೊಲೆ ಮಾಡಿದ ಫಯಾಜ್‌ನಿಗೆ ಕಾನೂನಿನ ಯಾವುದೇ ಭಯ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯಿಂದ ವಿದ್ಯಾರ್ಥಿ ಸಮುದಾಯ ಭಯಭೀತಗೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಕೊಲೆಗಾರನಿಗೆ ಕಾನೂನಿನ ಪರಮೋಚ್ಛ ಶಿಕ್ಷೆ ಕೊಡಿಸುವ ಜತೆಗೆ ರಾಜ್ಯದಲ್ಲಿ ಪೊಲೀಸರು ಶಾಲಾ ಕಾಲೇಜು ಬಳಿ ಮಫ್ತಿಯಲ್ಲಿ ಕಾರ್ಯನಿರ್ವಹಿಸಿ ಸಂಭಾವ್ಯ ಇಂಥ ಘಟನೆಗಳನ್ನು ತಡೆಯಬೇಕು. ಶಾಲಾ- ಕಾಲೇಜು ಕ್ಯಾಂಪಸ್‌ಗಳು ಸುರಕ್ಷಿತವಾಗಬೇಕು. ಇಂಥ ಪ್ರಕರಣದ ಆರೋಪಿಗಳಿಗೆ ಕಾನೂನಿನ ಭಯ ಹುಟ್ಟಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಮನವಿಯಲ್ಲಿ ಎಬಿವಿಪಿ ಆಗ್ರಹಿಸಿದೆ.ಎಬಿವಿಪಿ ಶಿರಸಿ ವಿಭಾಗ ಸಂಚಾಲಕ ವೀರೇಂದ್ರ ಗುನಗಾ, ಗುರುಪ್ರಸಾದ, ಕಿಶನ್ ಹಾಗೂ ಕುಮಾರ ಇತರರು ಇದ್ದರು.