ಒಳ ಮೀಸಲಾತಿಗೆ ಒತ್ತಾಯಿಸಿ ಹೊಸಪೇಟೆಯಲ್ಲಿ ಪ್ರತಿಭಟನೆ

| Published : Oct 17 2024, 12:01 AM IST

ಒಳ ಮೀಸಲಾತಿಗೆ ಒತ್ತಾಯಿಸಿ ಹೊಸಪೇಟೆಯಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಒಳ ಮೀಸಲಾತಿ ಜಾರಿಯಿಂದ ತಳ ಸಮುದಾಯಗಳಿಗೆ ಅನುಕೂಲವಾಗಲಿದೆ.

ಹೊಸಪೇಟೆ: ರಾಜ್ಯ ಸರ್ಕಾರ ಶೀಘ್ರ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲಾ ಒಳ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಮಾದಿಗ ಸಮಾಜ ಬಾಂಧವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಜೈಭೀಮ್ ವೃತ್ತದಿಂದ ಬೃಹತ್ ಬೈಕ್ ರ‍್ಯಾಲಿ ನಡೆಸಿದ ಪ್ರತಿಭಟನಾಕಾರರು ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಶೀಘ್ರ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ವಿಜಯನಗರ ಜಿಲ್ಲೆ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ.ಉಮಾಪತಿ ಮಾತನಾಡಿ, ಒಳ ಮೀಸಲಾತಿ ಜಾರಿಯಿಂದ ತಳ ಸಮುದಾಯಗಳಿಗೆ ಅನುಕೂಲವಾಗಲಿದ್ದು, ಮಾದಿಗ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಸಿಗಲಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಮಾದಿಗ ಸಮಾಜದ ಮುಖಂಡ ಎಂ.ಸಿ. ವೀರಸ್ವಾಮಿ ಮಾತನಾಡಿ, ಸತತ ಮೂರು ದಶಕಗಳ ಹೋರಾಟದ ಫಲವಾಗಿ ಒಳ ಮೀಸಲಾತಿ ಜಾರಿಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮಾದಿಗ ಸಮಾಜ ಬೆಂಬಲಿಸಿ, ಗೆಲುವಿಗೆ ಕಾರಣವಾಗಿದೆ. ಇದೀಗ ಮಾದಿಗ ಸಮಾಜಕ್ಕೆ ನ್ಯಾಯ ಒದಗಿಸುವ ಕಾಲ ಕೂಡಿ ಬಂದಿದೆ. ಕೂಡಲೇ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವ ಮೂಲಕ ಮಾದಿಗ ಸಮಾಜದ ಋಣ ತೀರಿಸಿಕೊಳ್ಳಬೇಕು. ಒಳ ಮೀಸಲಾತಿ ಜಾರಿಯಾಗುವವರೆಗೂ ಬ್ಯಾಕ್‌ ಲ್ಯಾಗ್‌ ಹುದ್ದೆಗಳನ್ನು ಸ್ಥಗಿತಗೊಳಿಸಿಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತಂಗ ಪರ್ವತ ಹಂಪಿ ಶ್ರೀ ಪೂರ್ಣಾನಂದ ಭಾರತೀ ಸ್ವಾಮೀಜಿಗಳು, ಮಾದಿಗ ಸಮುದಾಯದ ಮುಖಂಡರಾದ ಜಗನ್ನಾಥ, ಜೆ.ಬಿ ರಾಘವೇಂದ್ರ, ಶೇಷು, ಭರತ್ ಕುಮಾರ್, ಎಚ್.ಎಸ್ ವೆಂಕಪ್ಪ, ಬಿ.ಮಾರೆಣ್ಣ, ಶೇಕ್ಷಾವಲಿ, ಕೊಟಗಿನಹಾಳ್ ಮಲ್ಲಿಕಾರ್ಜುನ, ಕಾರಿಗನೂರು ಲಕ್ಷ್ಮಣ, ಮರಿದಾಸ, ಶ್ರೀನಿವಾಸ, ವಿಜಯಕುಮಾರ, ಕರಿಯಪ್ಪ, ಬಸವರಾಜ, ವಿನೋದ್, ಉದಯಕುಮಾರ್, ಕೂಡ್ಲಿಗಿ ಸಂತೋಷ, ಒಳ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು, ಮಾದಿಗ ಸಮಾಜದ ಮುಖಂಡರು, ಯುವಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಹೊಸಪೇಟೆಯಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಮಾದಿಗ ಸಮಾಜದ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.