ಸಾರಾಂಶ
ಬೆಳಗಾವಿಯಲ್ಲಿ ಸಿ.ಟಿ. ರವಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಇದೀಗ ಛಲವಾದಿ ನಾರಾಯಣ ಸ್ವಾಮಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅವರ ಮೇಲೆ ಮಸಿ ಎಸೆದು ಅವಮಾನ ಮಾಡಲಾಗಿದೆ.
ಕೊಪ್ಪಳ:
ಕಲಬುರಗಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಮೇ 24ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು ಹೇಳಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆ ತಮ್ಮ ಬೆಂಬಲಿಗರನ್ನು ಬಿಟ್ಟು ಹಲ್ಲೆ ಮಾಡಿಸಿ ಅವಮಾನಿಸಿದ್ದಾರೆ. ಇದು ಖಂಡನೀಯ ಎಂದರು.
ಬೆಳಗಾವಿಯಲ್ಲಿ ಸಿ.ಟಿ. ರವಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಇದೀಗ ಛಲವಾದಿ ನಾರಾಯಣ ಸ್ವಾಮಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅವರ ಮೇಲೆ ಮಸಿ ಎಸೆದು ಅವಮಾನ ಮಾಡಲಾಗಿದೆ. ಈ ಕುರಿತು ರಾಜ್ಯಾದ್ಯಂತ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದು. ಅದರಂತೆ ಶನಿವಾರ ಕಲಬುರಗಿಯಲ್ಲಿ ನಡೆಯುವ ಹೋರಾಟದಲ್ಲೂ ಭಾಗವಹಿಸಲಾಗುವುದು ಎಂದು ತಿಳಿಸಿದರು.ಪ್ರತಿ ತಾಲೂಕಿನಲ್ಲಿ ಹೋರಾಟ ನಡೆಸುವ ಮೂಲಕ ಕಾಂಗ್ರೆಸ್ಸಿಗರನ್ನು ಓಡಿಸಲಾಗುವುದು. ಅವರು ಕಪ್ಪು ಪಟ್ಟಿ ಧರಿಸಿ, ಕಿವಿಯಲ್ಲಿ ಹೂವಿಟ್ಟು ಪ್ರತಿಭಟನೆ ಮಾಡಿದ್ದು ನೋಡಿದ್ದೇವೆ. ಆದರೆ, ನಮ್ಮ ಮುಖಂಡರು ಬೆಳಗಾವಿಯಲ್ಲಿ ಕಪ್ಪುಪಟ್ಟಿ ತೋರಿಸಿದ್ದಕ್ಕೆ ಇದೀಗ ಛಲವಾದಿ ನಾರಾಯಣ ಸ್ವಾಮಿ ಅವರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿದರೆ ದೊಡ್ಡವರಾಗುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ ಎಂದಿರುವ ಅವರು, ಮೋದಿ ಬಗ್ಗೆ ಹಗುರ ಮಾತು ಸಲ್ಲದು ಎಂದು ಎಚ್ಚರಿಸಿದ್ದಾರೆ.