ಸಾರಾಂಶ
ಕವಿತಾಳದಲ್ಲಿ ಕಳೆದ 3 ತಿಂಗಳಿಂದ ನೀರು ಬಾರದ ಕಾರಣ ಬೇಸತ್ತ ಗ್ರಾಮಸ್ಥರು. ಹಿರೇಹಣಿಗಿ ಗ್ರಾಮದ 2ನೇ ವಾರ್ಡಿನ ಜನರು ಸೋಮವಾರ ಗ್ರಾಪಂಗೆ ಬೀಗ ಹಾಕಿ ಖಾಲಿ ಕೊಡಗಳೊಂದಿಗೆ ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಕವಿತಾಳ
ಕಳೆದ ಮೂರು ತಿಂಗಳಿಂದ ನೀರು ಬಾರದ ಕಾರಣ ಬೇಸತ್ತ ಹಿರೇಹಣಿಗಿ ಗ್ರಾಮದ 2ನೇ ವಾರ್ಡಿನ ಜನರು ಸೋಮವಾರ ಗ್ರಾಪಂಗೆ ಬೀಗ ಹಾಕಿ ಖಾಲಿ ಕೊಡಗಳೊಂದಿಗೆ ಪ್ರತಿಭಟಿಸಿದರು.2ನೇ ವಾರ್ಡಿನಲ್ಲಿ ಮೂರು ತಿಂಗಳುಗಳಿಂದ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ, ಈ ಕುರಿತು ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ನೀರಿಗಾಗಿ ಪಕ್ಕದ ಓಣಿಗೆ ಹೋಗುವಂತಾಗಿದೆ. 1ನೇ ವಾರ್ಡಿನಲ್ಲಿ ಮಧ್ಯರಾತ್ರಿ ನೀರು ಬಿಡುತ್ತಾರೆ. ಆ ಸಂದರ್ಭದಲ್ಲಿ ನಿದ್ದೆಗೆಟ್ಟು ಕತ್ತಲಲ್ಲಿ ಮಹಿಳೆಯರು, ಮಕ್ಕಳು ನೀರಿಗಾಗಿ ಹೋಗುವಂತಾಗಿದೆ ಎಂದು ನಾಗಮ್ಮ, ಕಾಳಮ್ಮ, ಹುಸೇನಮ್ಮ, ಮಲ್ಲಮ್ಮ, ಹಂಪಮ್ಮ ರೇಣುಕಮ್ಮ, ಗಂಗಮ್ಮ, ಯಲ್ಲಮ್ಮ, ಮೀನಾಕ್ಷಿ, ಪಾರ್ವತೆಮ್ಮ, ನಾಗಮ್ಮ ಆರೋಪ ಮಾಡಿದರು.
ಮೂರು ತಿಂಗಳಿಂದ ಈ ಕುರಿತು ಮಾಹಿತಿ ನೀಡುತ್ತಿದ್ದರೂ ಯಾರೊಬ್ಬರೂ ನೀರು ಪೂರೈಕೆ ಮಾಡುವ ಬಗ್ಗೆ ಗಮನ ಹರಿಸುತ್ತಿಲ್ಲ. ಅನಿವಾರ್ಯವಾಗಿ ಪಂಚಾಯಿತಿಗೆ ಬೀಗ ಹಾಕಬೇಕಾಗಿದೆ. ಪಕ್ಕದ ಓಣಿಗಳಲ್ಲಿ ನಳಕ್ಕೆ ಮೋಟರ್ ಹಚ್ಚುವುದರಿಂದ ನಮಗೆ ನೀರು ಬರುತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಮೌನವಾಗಿದ್ದಾರೆ. ಸಂಬಳ ನೀಡದ ಕಾರಣ ವಾಟರ್‌ಮೆನ್‌ಗಳು ಕೆಲಸ ಬಿಟ್ಟಿದ್ದಾರೆ. ಹೀಗಾಗಿ ಸದಸ್ಯರು ಅಥವಾ ಸಾರ್ವಜನಿಕರು ನೀರು ಬಿಡುತ್ತಾರೆ.ಅಧಿಕಾರಿಗಳು ಕಾಳಜಿ ವಹಿಸದ ಕಾರಣ ಓಣಿಯ ಜನರು ಸೇರಿಕೊಂಡು ನಮ್ಮ ಸ್ವಂತ ಹಣದಿಂದ ಪೈಪ್ ಲೈನ್ ಮಾಡಿಕೊಂಡಿದ್ದೇವೆ. ಇಷ್ಟಾಗಿಯೂ ನೀರು ಬರುತ್ತಿಲ್ಲ ಮತ್ತು ನೀರಿನ ತೆರಿಗೆ ಪಾವತಿ ಹೆಸರಲ್ಲಿ ಕೆಲವರಿಂದ ಸಾವಿರಗಟ್ಟಲೇ ಹಣ ವಸೂಲಿ ಮಾಡಿದ್ದಾರೆ ಆದರೆ ನೀರು ಮಾತ್ರ ಸರಬರಾಜು ಮಾಡುತ್ತಿಲ್ಲ ಎಂದು ನರಸಪ್ಪ, ಜಂಬಣ್ಣ, ಹನುಮಂತ, ಬೀರಪ್ಪ, ಮುದುಕಪ್ಪ, ಹನುಮಂತ, ಮಲ್ಲಯ್ಯ ಆರೋಪಿಸಿದರು.
ಪಂಚಾಯ್ತಿಗೆ ಭೇಟಿ ನೀಡಿದ ನಂತರ ಸಮಸ್ಯೆ ಕುರಿತು ಪರಿಶೀಲಿಸಲಾಗುವುದು ಎಂದು ಪಿಡಿಒ ಪ್ರಸಾದ ತಿಳಿಸಿದರು.