ಸಾರಾಂಶ
ಯಲ್ಲಾಪುರ: ೧ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಎಸಗಿದ ದೌರ್ಜನ್ಯ ಖಂಡಿಸಿ ಕಿರವತ್ತಿಯಲ್ಲಿ ಸಾವಿರಾರು ಜನ ಗುರುವಾರ ರಾತ್ರಿ ಪ್ರತಿಭಟಿಸಿದರು. ಆರೋಪಿ ಅಸ್ಲಾಂಗೆ ಮರಣ ದಂಡನೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.
ಅಕ್ರಮ ಸರಾಯಿ ಹಾಗೂ ಗಾಂಜಾ ನಶೆಯಲ್ಲಿ ಹೇಯಕೃತ್ಯ ನಡೆದಿದ್ದು, ಅಕ್ರಮ ಚಟುವಟಿಕೆಯನ್ನು ಮೊದಲು ತಡೆಯಿರಿ ಎಂದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಒತ್ತಾಯಿಸಿದರು.ಕಿರವತ್ತಿಯ ಪೊಲೀಸ್ ಹೊರಠಾಣೆ ಬಳಿ ಜಮಾಯಿಸಿದ ಜನ ತಮ್ಮೊಳಗಿನ ಆಕ್ರೋಶ ಹೊರ ಹಾಕಿದರು. ಪುಟ್ಟ ಬಾಲಕಿಯ ಬದುಕು ಹಾಳು ಮಾಡಿದ ಪಾಪಿಯನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು. ಸಂತ್ರಸ್ತ ಬಾಲಕಿ ಕುಟುಂಬದವರು ಕೂಡ ಪ್ರತಿಭಟನೆಯ ಸಂದರ್ಭದಲ್ಲಿ ಆಗಮಿಸಿ ಕಣ್ಣೀರು ಹಾಕಿದರು.
ಮಕ್ಕಳ ಮೇಲಿನ ದೌರ್ಜನ್ಯ ತಡೆಯಿರಿ. ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿ ಎಂದು ಪ್ರತಿಭಟನಾಕಾರರು ಆಕ್ರೋಶದಿಂದ ಆಗ್ರಹಿಸಿದರು. ಸಂತ್ರಸ್ತ ಬಾಲಕಿ ಕುಟುಂಬಕ್ಕೆ ₹೨೫ ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು. ಬಾಲಕಿಯ ಆರೋಗ್ಯ ಸ್ಥಿತಿಯ ಬಗ್ಗೆ ದಿನಕ್ಕೆರಡು ಬಾರಿ ಊರಿನವರಿಗೆ ಮಾಹಿತಿ ಒದಗಿಸಬೇಕು ಎಂಬ ಬೇಡಿಕೆಗಳನ್ನು ಕಿರವತ್ತಿ ಗ್ರಾಪಂ ಸದಸ್ಯ ಸುನೀಲ ಕಾಂಬಳೆ ಮುಂದಿಟ್ಟರು. ನೆರೆದಿದ್ದ ಪ್ರತಿಭಟನಾಕಾರರು ಈ ಮಾತನ್ನು ಅನುಮೋದಿಸಿದರು.ಕಿರವತ್ತಿಯ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಅತ್ಯಾಚಾರ ಘಟನೆ ಖಂಡಿಸಿದರು. ಬಾಲಕಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು. ಉನ್ನತ ಗುಣಮಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಸಂಘಟನೆಗಳಿಂದಲೂ ಮನವಿ:ಬಾಲಕಿ ದೌರ್ಜನ್ಯ ಖಂಡಿಸಿ ವಿವಿಧ ಮಹಿಳಾ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದವು.
ಉಪತಹಶೀಲ್ದಾರ್ ಎಚ್.ಎನ್. ರಾಘವೇಂದ್ರ, ನೆರೆದಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಕಾನೂನಿನ ಅಡಿ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಲು ಪ್ರಯತ್ನಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ನಿಗದಿತ ಸಮಯದೊಳಗಾಗಿ ಶಿಕ್ಷೆ ವಿಧಿಸದಿದ್ದಲ್ಲಿ ಪುನಃ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.ಕಿರವತ್ತಿ ಹಾಗೂ ಸುತ್ತಲಿನ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಗಾಂಜಾ ಮಾರಾಟ ನಡೆದಿದೆ. ಅಕ್ರಮ ಸರಾಯಿ ಮಾರಾಟ ಕೂಡ ಜೋರಾಗಿದೆ. ದೂರು ನೀಡಿದರೂ ಕ್ರಮವಾಗಿಲ್ಲ ಎಂದು ಮಹಿಳೆಯರು ದೂರಿದರು.
ನಶೆಯ ಗುಂಗಿನಲ್ಲಿಯೇ ಅತ್ಯಾಚಾರ ನಡೆದಿದೆ. ಮೊದಲು ಅಕ್ರಮ ತಡೆಯಿರಿ ಎಂದು ಪೊಲೀಸರ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದರು. ಈ ಹೇಳಿಕೆ ವಿಡಿಯೋ ಚಿತ್ರೀಕರಿಸಿದ ಮಾಧ್ಯಮದವರ ಮೊಬೈಲ್‌ನ್ನು ಪೊಲೀಸರು ಕಿತ್ತುಕೊಂಡು, ನಂತರ ಮರಳಿಸಿದರು.ಪ್ರಮುಖರಾದ ರಜತ್ ಖಾನಾಪುರ, ಬೇಬಿ ಅಮಿನಾ, ರಾಘು ಗೊಂದಿ, ಶಾಹಿನ್ ಮುಜಾವರ, ಬಾಬಾಜಾನ್ ಶೇಖ್, ಶಿವಲೀಲ ಹಣಸಗಿ, ಗಂಗಾಧರ ಲಮಾಣಿ, ಮಾರುತಿ ಕಳಸೂರಕರ್, ಮಹೇಶ ಪೂಜಾರ್, ಮಧುರಾ ಹೆಗಡೆ, ವಿಲ್ಸನ್ ಫರ್ನಾಂಡಿಸ್, ವಿಠಲ ಶಲಕೆ, ಅನ್ವರ್ ನಜೀರ ಅಹ್ಮದ್ ನದಾಫ, ಸಲೀಂ ಅಲ್ಲಾಭಕ್ಷ ವಂಟನಾಳ, ಪರಶುರಾಮ ಚಲವಾದಿ, ರವಿ ನಾಯ್ಕ, ರಿಯಾನ್ ಉಸ್ಮಾನ್ ಪಟೇಲ್ ಸೇರಿ ಸುತ್ತಲಿನ ಹಲವು ಹಳ್ಳಿಗಳ ಸಾವಿರಾರು ಜನ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.