ಕುಡಿಯುವ ನೀರಿಗಾಗಿ ಬೇಲೂರಿನ ರಾಯಪುರ ಗ್ರಾಮದಲ್ಲಿ ಪ್ರತಿಭಟನೆ

| Published : Jun 01 2024, 12:45 AM IST

ಸಾರಾಂಶ

ಬೇಲೂರು ಪಟ್ಟಣಕ್ಕೆ ಹೊಂದಿಕೊಂಡಿರುವ ರಾಯಪುರ ಗ್ರಾಮದಲ್ಲಿ ಕಳೆದ ಆರು ತಿಂಗಳಿಂದ ನೀರಿಲ್ಲದೇ ಪರದಾಡುತ್ತಿದ್ದು ಸಮಸ್ಯೆಯನ್ನು ಬಗೆಹರಿಸುವಲ್ಲಿ ಬಂಟೆನಹಳ್ಳಿ ಗ್ರಾಮ ಪಂಚಾಯಿತಿ ವಿಫಲವಾಗಿದೆ ಎಂದು ಗ್ರಾಮಸ್ಥರು ಖಾಲಿ ಕೊಡ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಲಿ ಕೊಡ ಹಿಡಿದು ಧರಣಿ । ಗ್ರಾಪಂ ವಿರುದ್ಧ ಆಕ್ರೋಶ

ಬೇಲೂರು: ಪಟ್ಟಣಕ್ಕೆ ಹೊಂದಿಕೊಂಡಿರುವ ರಾಯಪುರ ಗ್ರಾಮದಲ್ಲಿ ಕಳೆದ ಆರು ತಿಂಗಳಿಂದ ನೀರಿಲ್ಲದೇ ಪರದಾಡುತ್ತಿದ್ದು ಸಮಸ್ಯೆಯನ್ನು ಬಗೆಹರಿಸುವಲ್ಲಿ ಬಂಟೆನಹಳ್ಳಿ ಗ್ರಾಮ ಪಂಚಾಯಿತಿ ವಿಫಲವಾಗಿದೆ ಎಂದು ಗ್ರಾಮಸ್ಥರು ಖಾಲಿ ಕೊಡ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮಾತನಾಡಿದರು. ಸ್ಥಳೀಯ ನಿವಾಸಿಗಳಿಗೆ ಕುಡಿಯಲು ನೀರಿಲ್ಲದೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದಾರೆ. ಯಗಚಿ ಜಲಾಶಯವು ಹತ್ತಿರ ಇದ್ದು ನೀರಿಲ್ಲದೆ ರಾಯಪುರ ಗ್ರಾಮಸ್ಥರು ಪರೆದಾಡುತ್ತಿದ್ದಾರೆ. ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ವಿಪರ್ಯಾಸವೆಂದರೆ ಇದೇ ರಾಯಪುರ ಗ್ರಾಮ ಪಂಚಾಯತಿಯ ಸದಸ್ಯ ಅಧ್ಯಕ್ಷ ಆಗಿರೋದರಿಂದ ಗ್ರಾಮ ಅಭಿವೃದ್ಧಿಗೆ ಹಗಲಿರುಳು ದುಡಿದು ಮಾದರಿ ಗ್ರಾಮ ಮಾಡುತ್ತಾರೆ ಎಂದು ಬಹಳ ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರಿಗೆ ನಿರಾಸೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ವೀರ ಕನ್ನಡಿಗ ತಾಲೂಕು ಅಧ್ಯಕ್ಷ ರವಿ, ಅಧ್ಯಕ್ಷ ಧನಂಜಯ್ ಅವರು ಸಮಸ್ಯೆಯನ್ನು ನೋಡಿಕೊಂಡೆ ಓಡಾಡುತ್ತಿದ್ದಾರೆ. ಮೊದಲೇ ಇದ್ದ ಮೋಟರನ್ನು ಕೊಳವೆಬಾವಿಯಿಂದ ಎತ್ತಿ ಅದೇ ಹಳೆಯ ಮೋಟರಿಗೆ ಬಣ್ಣ ಬಳಿದು ಹೊಸದೆಂದು ಹೇಳಿ ಸರ್ಕಾರದ ಖಜಾನೆಗೆ ಲಕ್ಷಾಂತ ರು. ವಂಚಿಸಿದ್ದಾರೆ. ಇವರ ಅವಧಿಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ ಸಂಬಂಧಪಟ್ಟ ಮೇಲಧಿಕಾರಿಗಳು ತನಿಖೆ ನಡೆಸಿ ಈ ಸಮಸ್ಯೆ ಬಗೆಹರಿಸಬೇಕು. ಇಲ್ಲವೆಂದರೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ, ಲೋಕಾಯುಕ್ತಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ರಾಘವೇಂದ್ರ ಲೋಕೇಶ್, ಚಿಕ್ಕಮ್ಮ, ಭವ್ಯ, ಪ್ರಿಯಾಂಕಾ, ಲತಾ, ಭೀಮ್ ಆರ್ಮಿ ತಾಲೂಕು ಪ್ರಧಾನ ಕಾರ್ಯದರ್ಶಿ ಸುನಿಲ್ ರಾಯಪುರ ಹಾಗೂ ಗ್ರಾಮಸ್ಥರು ಹಾಜರಿದ್ದರು.