ಸಕಲೇಶಪುರದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

| Published : Sep 27 2024, 01:21 AM IST

ಸಾರಾಂಶ

ಎಲ್ಲ ಮೊಬೈಲ್‌ ಆ್ಯಪ್‌ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಿವೆ. ಆಧಾರ್ ಸೀಡಿಂಗ್, ಬಗರ್‌ಹುಕುಂ, ಹಕ್ಕುಪತ್ರ, ನಮೂನೆ 1-5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆ್ಯಪ್ ಹೀಗೆ ಹತ್ತಾರು ಆ್ಯಪ್‌ಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡಬೇಕಿದೆ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಇದರಿಂದ ಬೇಸತ್ತು ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಗ್ರಾಮ ಆಡಳಿತ ಅಧಿಕಾರಿಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಸಂಘ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ತಹಶೀಲ್ದಾರ್‌ ಕಚೇರಿ ಬಳಿ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಗೌರವ ಅಧ್ಯಕ್ಷ ದೀಪಕ್ ಮಾತನಾಡಿ, ಮೊಬೈಲ್‌ ಆ್ಯಪ್‌, ವೆಬ್‌ ಅಪ್ಲಿಕೇಶನ್‌ಗಳ ಮೂಲಕ ಹೆಚ್ಚಿನ ಸೌಕರ್ಯ ಕಲ್ಪಿಸಲಾಗುತ್ತಿದೆ. ಆದರೆ, ಇದೇ ವೇಳೆ ಸಿಬ್ಬಂದಿ ಮೇಲೆ ಹೆಚ್ಚಿನ ಕಾರ್ಯಭಾರದ ಒತ್ತಡ ಉಂಟಾಗುತ್ತಿದೆ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಸಮಸ್ಯೆಗಳಾಗುತ್ತಿವೆ ಎಂದು ಹೇಳಿದರು.

ಎಲ್ಲ ಮೊಬೈಲ್‌ ಆ್ಯಪ್‌ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಿವೆ. ಆಧಾರ್ ಸೀಡಿಂಗ್, ಬಗರ್‌ಹುಕುಂ, ಹಕ್ಕುಪತ್ರ, ನಮೂನೆ 1-5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆ್ಯಪ್ ಹೀಗೆ ಹತ್ತಾರು ಆ್ಯಪ್‌ಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡಬೇಕಿದೆ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಇದರಿಂದ ಬೇಸತ್ತು ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.

ತಾಲೂಕು ಸೇರಿದಂತೆ ರಾಜ್ಯದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಪದೋನ್ನತಿಯ ವಿಚಾರದಲ್ಲೂ ವಂಚಿತರಾಗಿದ್ದೇವೆ. ಕಂದಾಯ ಇಲಾಖೆಯ 3 ವರ್ಷಗಳ ಸೇವೆ ಪರಿಗಣಿಸಿ ಅಂತರ್‌ ಜಿಲ್ಲಾ ವರ್ಗಾವಣೆಗೆ ಅವಕಾಶವಿಲ್ಲ ಇದರಿಂದ ಪದೋನ್ನತ್ತಿಯಲ್ಲಿ ಸಾಕಷ್ಟು ಅನ್ಯಾಯವಾಗುತ್ತಿದೆ. ಅನೇಕರು ನಿವೃತ್ತಿ ಅಂಚಿನಲ್ಲಿದ್ದಾರೆ. ಆದರೆ, ಪದೋನ್ನತ್ತಿ ಕೊಟ್ಟಿಲ್ಲ, ಪತಿ-ಪತ್ನಿ ಪ್ರಕರಣಗಳಲ್ಲಿ ವರ್ಗಾವಣೆ ಪ್ರಕ್ರಿಯೆ ತ್ವರಿತ ಗತಿಯಲ್ಲಿ ಪೂರ್ಣಗೊಳಿಸುತ್ತಿಲ್ಲ. ಮೇಲಧಿಕಾರಿಗಳು ನೀಡುವ ಕೆಲಸದ ಒತ್ತಡದಿಂದ ರಜೆಯ ದಿನಗಳಲ್ಲಿ ಕೆಲಸ ನಿರ್ವಹಿಸುವಂಥಾಗಿದೆ ಎಂದರು. ಕಳೆದ ಒಂದು ವರ್ಷದಲ್ಲಿ ಕೆಲಸದ ಒತ್ತಡ ತಾಳಲಾರದೆ 24 ಮಂದಿ ಗ್ರಾಮ ಆಡಳಿತ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಹೇಳಿದರು. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್‌.ಎಂ, ಗೌರವ ಅಧ್ಯಕ್ಷ ಸುನೀಲ್ ಕುಮಾರ್‌, ಸಿದ್ದ ಲಿಂಗೇಶ್, ಆಸೀಫ್, ಶಿವಕುಮಾರ್‌ ಇತರೆ ಗ್ರಾಮ ಆಡಳಿತ ಆಧಿಕಾರಿಗಳು ಪಾಲ್ಗೊಂಡಿದ್ದರು.