ಸಾರಾಂಶ
ಶಿರಹಟ್ಟಿ: ತೋಂಟದಾರ್ಯ ಮಠದ ಭಾವೈಕ್ಯತಾ ದಿನಾಚರಣೆ ವಿರೋಧಿಸಿ ಶಿರಹಟ್ಟಿ ಫಕೀರೇಶ್ವರ ಮಠದಿಂದ ನಡೆಸಲು ನಿರ್ಧರಿಸಿದ್ದ ಕರಾಳ ದಿನಾಚರಣೆ ತಡೆಯಲು ತಾಲೂಕಾಡಳಿತ ಯಶಸ್ವಿಯಾಗಿದೆ.ಪಟ್ಟಣದಲ್ಲಿ ಫೆ. 20ರ ಮಧ್ಯರಾತ್ರಿಯಿಂದಲೇ ಕಲಂ 144 ಜಾರಿಗೊಳಿಸಲಾಗಿದ್ದು, ಯಾವುದೇ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿಲ್ಲ.೧೬ನೇ ಶತಮಾನದಿಂದಲೂ ಶಿರಹಟ್ಟಿ ಶ್ರೀ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಮಠದ ಜಗದ್ಗುರುಗಳಿಗೆ ಮೀಸಲಾಗಿರುವ ಭಾವೈಕ್ಯತಾ ಹರಿಕಾರ ಎಂಬ ಪದವನ್ನು ಗದಗ ತೋಂಟದ ಸಿದ್ದಲಿಂಗ ಶ್ರೀಗಳ ೭೫ನೇ ಜಯಂತಿ ದಿನದಂದು ಬಳಸುವುದನ್ನು ವಿರೋಧಿಸಿ ಫೆ. ೨೧ರಂದು ಗದಗ ನಗರದಲ್ಲಿ ಕರಾಳ ದಿನಾಚರಣೆ ನಡೆಸಲು ನಿರ್ಧರಿಸಲಾಗಿತ್ತು.ತಾಲೂಕು ಆಡಳಿತ ಮಂಗಳವಾರ ರಾತ್ರಿಯೇ ಪಟ್ಟಣದ ಕೆಲವರ ಮೇಲೆ ನೋಟಿಸ್ ಜಾರಿ ಮಾಡಿ, ಪಟ್ಟಣದಾದ್ಯಂತ ಮತ್ತು ಶ್ರೀಮಠದ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಮಠಕ್ಕೆ ಯಾರೂ ಪ್ರವೇಶಿಸದಂತೆ ಪೊಲೀಸರು ತಡೆಹಿಡಿದರು.
ಈ ಕುರಿತಂತೆ ಬುಧವಾರ ಶ್ರೀಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಪತ್ರಿಕಾಗೋಷ್ಠಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶ್ರೀ ಮಠದ ಪರಂಪರೆಯ ಮೇಲೆ ದಾಳಿ ಮಾಡುವ ರೀತಿಯಲ್ಲಿ ತೋಟದಾರ್ಯ ಮಠದ ಶ್ರೀಗಳು ಇತ್ತಿತ್ತಲಾಗಿ ಹೊಸ ಪ್ರಯೋಗ ಮಾಡುತ್ತಿರುವುದನ್ನು ನಾವು ನಮ್ಮ ಭಕ್ತರು ವಿರೋಧಿಸುತ್ತೇವೆ. ಭಾವೈಕ್ಯತೆ ಪದ ಬಳಕೆ ಮಾಡಬಾರದು ಎಂದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶಿರಹಟ್ಟಿಯ ಭಕ್ತರು ಮನವಿ ಸಲ್ಲಿಸಿದ್ದರು. ಬುಧವಾರ ಈ ಕುರಿತಂತೆ ಗದಗ ನಗರದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಪ್ರತಿಭಟನೆ ಹತ್ತಿಕ್ಕಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಕಲಂ ೧೪೪ ಜಾರಿ ಮಾಡಿದೆ. ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಭಕ್ತರ ಮನೆಗೆ ತೆರಳಿ ಅವರ ಮನೆಬಾಗಿಲು ತಟ್ಟಿ ನೋಟಿಸ್ ಜಾರಿ ಮಾಡಿದ್ದಾರೆ ಎಂದರು.ಪೊಲೀಸರು ನಮ್ಮ ಮಠದ ಭಕ್ತರ ಮೇಲೆ ದೌರ್ಜನ್ಯ ನಡೆಸಿರುವುದು ದುರದೃಷ್ಟಕರ. ನಮ್ಮನ್ನು ಬಂಧಿಸಬಹುದೇ ಹೊರತು ನಮ್ಮ ಪರಂಪರೆಯನ್ನು ಬಂಧಿಸಲು ಸಾಧ್ಯವಿಲ್ಲ. ಜತೆಗೆ ನಮ್ಮ ವಾಹನ ಚಾಲಕನನ್ನು ಕೂಡ ಮಠದ ಹೊರಗಡೆ ತಡೆದು ನಿಲ್ಲಿಸಿದ್ದಾರೆ. ಪೊಲೀಸ್ ಇಲಾಖೆ ಒಂದು ಮಠದ ಪರವಾಗಿ ಸೇವಕರಂತೆ ಕೆಲಸ ಮಾಡುವ ಜತೆಗೆ ಮಾರಾಟವಾಗಿದೆ ಎಂದು ಆರೋಪಿಸಿದರು.
ನೊಟೀಸ್ ಹಿಂಪಡೆಯದಿದ್ದರೆ ಉಗ್ರ ಹೋರಾಟ: ಶಿರಹಟ್ಟಿ ಮಠದ ಭಕ್ತರು ಶಾಂತಿಗೆ ಭಂಗ ತರುವುದಾಗಲಿ, ಗಲಭೆ, ಗೊಂದಲ ಸೃಷ್ಟಿಸುವುದಾಗಲಿ ಮಾಡಿಲ್ಲ. ಯಾವುದೇ ದೌರ್ಜನ್ಯವೆಸಗಿಲ್ಲ. ಸುಖಾಸುಮ್ಮನೇ ಮಧ್ಯರಾತ್ರಿ ಪೊಲೀಸರು ಅವರ ಮನೆ ಮನೆಗೆ ತೆರಳಿ ಬಾಗಿಲು ತಟ್ಟಿ ನೊಟೀಸ್ ನೀಡಿ, ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಇಲಾಖೆ ವರ್ತನೆ ನೋಡಿದರೆ ಸಂಪೂರ್ಣ ತೋಂಟದಾರ್ಯ ಮಠದ ಪರವಾಗಿ ಕೆಲಸ ಮಾಡುತ್ತಿರುವಂತೆ ಕಂಡು ಬರುತ್ತಿದೆ. ಇಲಾಖೆ ವರ್ತನೆ ಪ್ರಜಾಸತಾತ್ಮಕ ಕೊಲೆಯಾಗಿದೆ. ನಮ್ಮ ಭಕ್ತರಿಗೆ ನೀಡಿದ ನೊಟೀಸ್ ತಕ್ಷಣವೇ ಹಿಂದೆ ಪಡೆಯದಿದ್ದರೆ ಹೋರಾಟದ ರೂಪ ಬದಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಶ್ರೀಗಳನ್ನು ಹೊರಗೆ ಬಿಡದೇ ತಡೆದ ಪೊಲೀಸರು: ೧೨.೩೦ರ ಸುಮಾರಿಗೆ ಫಕೀರ ದಿಂಗಾಲೇಶ್ವರ ಶ್ರೀಗಳು ಪತ್ರಿಕಾಗೋಷ್ಠಿ ಮುಗಿಸಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿರುವ ಮಠದ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಅಲ್ಲಿ ನಡೆದಿರುವ ಕಾಮಗಾರಿ ವೀಕ್ಷಣೆಗೆ ತೆರಳುವ ವೇಳೆ ಮಠದ ಅಗಸಿ ಬಾಗಿಲಿನ ಹತ್ತಿರವೇ ಪೊಲೀಸರು ಶ್ರೀಗಳ ವಾಹನ ಹೊರಗೆ ಹೋಗದಂತೆ ತಡೆದರು. ಕೆಲ ಹೊತ್ತು ಬಿಗುವಿನ ವಾತಾವರನ ಸೃಷ್ಟಿಯಾಗಿ ಕೊನೆಗೂ ಶ್ರೀಗಳೇ ಮರಳಿ ಮಠದ ಒಳಗೆ ತೆರಳಿದ ಪ್ರಸಂಗ ನಡೆಯಿತು.
ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಕಲಂ ೧೪೪ ಜಾರಿ ಮಾಡಿದ್ದು, ೧ ಡಿಎಸ್‌ಪಿ, ೬ ಸಿಪಿಐ, ೭ ಪಿಎಸ್‌ಐ ಹಾಗೂ ೮೦ ಪೊಲೀಸ್ ಸಿಬ್ಬಂದಿ, ೨ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.ಡಿವೈಎಸ್ಪಿ ಜೆಡ್.ಎಚ್. ಇನಾಮದಾರ, ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.