ಹಿಟ್ ಆ್ಯಂಡ್ ರನ್ ಪ್ರಕರಣದ ಕಾಯ್ದೆ ರದ್ದು ಮಾಡಿ

| Published : Jan 18 2024, 02:00 AM IST

ಸಾರಾಂಶ

ಸಿಂಧನೂರಿನ ಮಿನಿವಿಧಾನಸೌಧ ಕಚೇರಿ ಮುಂದೆ ಲಾರಿ ಚಾಲಕರ ಮತ್ತು ಕ್ಲೀನರ್ಸ್‌ಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಮಾಡಿದರು. ಬಳಿಕ ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ ಮನವಿ ಪತ್ರ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ಕೇಂದ್ರ ಸರ್ಕಾರ ಅಂಗೀಕಾರ ಮಾಡಿರುವ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್-2023) ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಲಾರಿ ಚಾಲಕರ ಮತ್ತು ಕ್ಲೀನರ್ಸ್‌ಗಳ ಒಕ್ಕೂಟ ಬುಧವಾರ ಎಪಿಎಂಸಿ ಗಣೇಶ ದೇವಸ್ಥಾನದಿಂದ ಮಿನಿವಿಧಾನಸೌಧ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.

ಒಕ್ಕೂಟದ ಅಧ್ಯಕ್ಷ ಭೀಮಣ್ಣ ಹೆಳವರ ಮಾತನಾಡಿ, ಇತ್ತೀಚೆಗೆ ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಗೈರು ಹಾಜರಿಯಲ್ಲಿ ಯಾವುದೇ ಚರ್ಚೆ ಇಲ್ಲದೆ ಹಿಟ್ ಆ್ಯಂಡ್ ರನ್ ಪ್ರಕರಣದ ಕಾಯ್ದೆಯನ್ನು ಜಾರಿ ಮಾಡಿದೆ. ಈ ಹೊಸ ನ್ಯಾಯ ಸಂಹಿತೆಯಲ್ಲಿ ಹಿಟ್ ಆ್ಯಂಡ್ ರನ್ ಕೇಸ್‌ನಲ್ಲಿ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆಯೊಂದಿಗೆ ರು.7 ಲಕ್ಷ ದಂಡ ವಿಧಿಸಬೇಕಾಗಿದೆ. ಜೊತೆಗೆ ಚಾಲನಾ ಪರವಾನಗಿ ರದ್ದಾಗಲಿದೆ. ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯನ್ನು ರದ್ದುಗೊಳಿಸಿ ಚಾಲಕರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.

ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ ಮನವಿ ಪತ್ರ ಸ್ವೀಕರಿಸಿದರು. ಗೌರವಾಧ್ಯಕ್ಷ ಅಬ್ದುಲ್ ಗನಿ, ಕಾರ್ಯದರ್ಶಿ ಅಬ್ಬು ಪಟೇಲ್, ಕರ್ನಾಟಕ ರಾಜ್ಯ ಹಮಾಲಿ ಫೆಡರೇಶನ್ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ತಿಪ್ಪಯ್ಯ, ಜಂಟಿ ಕಾರ್ಯದರ್ಶಿ ರಾಘವೇಂದ್ರ ಬೆಂಗಳೂರು, ಜಿಲ್ಲಾ ಅಧ್ಯಕ್ಷ ಯಂಕಪ್ಪ ಕೆಂಗಲ್, ಕಾರ್ಮಿಕ ಮುಖಂಡರಾದ ಬಿ.ಲಿಂಗಪ್ಪ, ಶರಭಣ್ಣ ನಾಗಲಾಪೂರ, ಮಹೇಶ ಸೇರಿದಂತೆ ನೂರಾರು ಲಾರಿ ಚಾಲಕರು, ಕ್ಲೀನರ್ಸ್‌ಗಳು ಇದ್ದರು.