ಸಾರಾಂಶ
ಯಲಬುರ್ಗಾ:
ತಾಲೂಕಿನ ಹಿರೇಮ್ಯಾಗೇರಿಯಲ್ಲಿ ಗುರುವಾರ ಪಿಡಿಒ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘ ಹಾಗೂ ನಾನಾ ವೃಂದ ಸಂಘದ ಸಹಯೋಗದಲ್ಲಿ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಶಿರಸ್ತೆದಾರ ಶರಣಬಸವರಾಜ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಪಿಡಿಒ ರತ್ನಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಾಗಲೇ ಗ್ರಾಪಂ ಸದಸ್ಯೆ ಶಾಂತಮ್ಮ ಹಾಗೂ ಅವರ ಪುತ್ರ ಭೀಮೇಶ ಬಂಡಿವಡ್ಡರ್ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಇದರೊಂದಿಗೆ ಜೀವ ಬೆದರಿಕೆ ಹಾಕುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ತಕ್ಷಣ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪಿಡಿಒ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಫ್.ಡಿ. ಕಟ್ಟಿಮನಿ ಹಾಗೂ ಸರ್ಕಾರಿ ರಾಜ್ಯ ಪರಿತಷ್ ಸದಸ್ಯ ಶಿವಪುತ್ರಪ್ಪ ತಿಪ್ಪನಾಳ ಮಾತನಾಡಿ, ಸದಸ್ಯಯೇ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಕೂಡಲೇ ಶಾಂತಮ್ಮ ಅವರ ಸದಸ್ಯತ್ವ ರದ್ದುಪಡಿಸಿ ಅವರ ಪುತ್ರ ಸೇರಿದಂತೆ ಇಬ್ಬರು ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದ ಅವರು, ಈ ಹಿಂದೇಯೇ ಪಿಡಿಒಗಳ ಮೇಲೆ ಇದೇ ರೀತಿ ಘಟನೆಗಳು ನಡೆದಿವೆ ಎಂದರು.ರಾಜ್ಯದಲ್ಲಿ ೧೫೦ಕ್ಕೂ ಹೆಚ್ಚು ಪಿಡಿಒ ಸೇರಿದಂತೆ ನಾನಾ ಇಲಾಖೆ ನೌಕರರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಇದರಿಂದ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಭಯಪಡುತ್ತಿದ್ದಾರೆ. ಸರ್ಕಾರ ಇಂತಹ ಘಟನೆಗಳನ್ನು ತಡೆಗಟ್ಟಲು ಹೊಸ ಕಾಯ್ದೆ ಜಾರಿಗೆ ತರಬೇಕು. ಹಲ್ಲೆ ಒಳಗಾದ ಪಿಡಿಒಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಪಿಡಿಒ ಸಂಘದ ತಾಲೂಕಾಧ್ಯಕ್ಷ ವೀರಭದ್ರಗೌಡ ಮೂಲಿಮನಿ, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವ್ಹಿ. ಧರಣಾ, ಕುಕನೂರು ಎನ್‌ಜಿಒ ಅಧ್ಯಕ್ಷ ಮಹೇಶ ಸಬರದ, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಮಂಜುನಾಥ ಮೇಟಿ ಮಾತನಾಡಿದರು.ಈ ವೇಳೆಯಲ್ಲಿ ಸಿಡಿಪಿಒ ಬೆಟ್ಟದೇಶ ಮಾಳೇಕೊಪ್ಪ, ನೌಕರರಾದ ಅಬ್ದುಲ್ ಗಬ್ಬರ್, ಕಳಕಮಲ್ಲಪ್ಪ ಅಂತೂರ, ಬಸವರಾಜ ಅಂಗಡಿ, ಶರಣಯ್ಯ ಸರಗಣಾಚಾರ, ಹಜರತ್ ಅಲಿ, ಬಸನಗೌಡ ರಾಮಶೆಟ್ಟಿ, ಶರಣಪ್ಪ ಕೆಳಗಿನಮನಿ, ಬಸವರಾಜ ಅಂಗಡಿ, ಹನುಮಂತರಾಯ ಯಂಕಂಚಿ, ಶಿವಕುಮಾರ ಐನಕ್ಕಿ, ನಾಗರಾಜ, ಸಂಗಯ್ಯ ಹಿರೇಮಠ, ದೇವರಾಜ ರೆಡ್ಡಿ, ವಿದ್ಯಾಶ್ರೀ ಹೊಟ್ಟೇರ, ಶ್ರುತಿ, ಸೋಮಪ್ಪ ಪೂಜಾರ, ಫಯಾಜ್, ಗೋಣೆಪ್ಪ ಜಿರ್ಲಿ, ಬಸವಲಿಂಗಪ್ಪ ಹಂಚಿನಾಳ, ಬಸವರಾಜ ಹಳ್ಳಿ, ಉಮೇಶ ಜೂಲಕಟ್ಟಿ ಹಾಗೂ ನಾನಾ ಇಲಾಖೆಗಳ ನೌಕರರು ಇದ್ದರು.