ಕಾರ್ಖಾನೆಗಳಿಗೆ ತುಂಗಭದ್ರಾ ನದಿ ನೀರು ಹರಿಸಿರುವ ಕ್ರಮ ವಿರೋಧಿಸಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಮುನಿರಾಬಾದ್ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ಪ್ರಾರಂಭಿಸಿದ್ದಾರೆ.
ಮುನಿರಾಬಾದ್: ಭೀಕರ ಬರಗಾಲದ ನಡುವೆಯೂ ನೀರಾವರಿ ಇಲಾಖೆಯ ಅಧಿಕಾರಿಗಳು ಕಾರ್ಖಾನೆಗಳಿಗೆ ನೀರು ಹರಿಸಿದ ಕ್ರಮವನ್ನು ವಿರೋಧಿಸಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣದಿಂದ ಅಮಾನತು ಮಾಡುವಂತೆ ಆಗ್ರಹಿಸಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಇಲ್ಲಿನ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ಪ್ರಾರಂಭಿಸಿದ್ದಾರೆ. ರೈತರ ಧರಣಿಯಲ್ಲಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಸಹ ಭಾಗವಹಿಸಿದರು.ಆಗಸ್ಟ್ ತಿಂಗಳಲ್ಲಿ ಮುನಿರಾಬಾದ್‌ನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ, ತುಂಗಭದ್ರಾ ಜಲಾಶಯದಲ್ಲಿ ನೀರಿನ ಶೇಖರಣೆ ಪ್ರಮಾಣ ಕಡಿಮೆ ಇರುವ ಕಾರಣ ನೀರನ್ನು ಕೇವಲ ಕುಡಿಯಲು ಹಾಗೂ ರೈತರ ಗದ್ದೆಗೆ ಹರಿಸಲು ನಿರ್ಧರಿಸಲಾಯಿತು. ಜಲಾಶಯದಲ್ಲಿ ನೀರಿನ ಪ್ರಮಾಣ ಎಷ್ಟು ಕಡಿಮೆ ಇತ್ತು ಎಂದರೆ ಸಲಹಾ ಸಮಿತಿಯ ಸಭೆಯಲ್ಲಿ ರೈತರ ಗದ್ದೆಗಳಿಗೆ ಕೇವಲ 3 ತಿಂಗಳು (ಆಗಸ್ಟ್ 11ರಿಂದ ನವೆಂಬರ್ 11ರ ವರೆಗೆ) ನೀರು ಹರಿಸಲು ನಿರ್ಧರಿಸಲಾಯಿತು. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೀರಾವರಿ ಸಲಹಾ ಸಮಿತಿ ಸಭೆ ಅಧ್ಯಕ್ಷ ಶಿವರಾಜ್ ತಂಗಡಗಿ, ಪ್ರಸಕ್ತ ಸಾಲಿನಲ್ಲಿ ಯಾವುದೇ ಕಾರಣಕ್ಕೂ ಕಾರ್ಖಾನೆಗಳಿಗೆ ನೀರನ್ನು ಹರಿಸುವುದಿಲ್ಲ ಎಂಬ ಹೇಳಿದ್ದರು.ಕಾರ್ಖಾನೆಗೆ ನೀರು: ನೀರಾವರಿ ಇಲಾಖೆ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಕಾಡಾ ಅಧ್ಯಕ್ಷರಾಗಲಿ ಯಾರ ಗಮನಕ್ಕೂ ತರದೆ, ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ವಿರುದ್ಧವಾಗಿ ಕಾರ್ಖಾನೆಗಳಿಗೆ ನೀರನ್ನು ಹರಿಸಲು ಪ್ರಾರಂಭಿಸಿದ್ದಾರೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಅಂಬರೀಶ್ ಜಾಗ್ಭಾವಿ ಆರೋಪಿಸಿದ್ದಾರೆ. ಅಧಿಕಾರಿಗಳಿಂದ ಬಚಾವತ್ ತೀರ್ಪಿನ ಉಲ್ಲಂಘನೆಯಾಗಿದೆ. ಬಚಾವತ್ ತೀರ್ಪಿನ ಪ್ರಕಾರ ಜಲಾಶಯದಲ್ಲಿರುವ ನೀರನ್ನು ಪ್ರಥಮ ಆದ್ಯತೆ ಮೇರೆಗೆ ಕುಡಿಯಲು ಬಳಸಬೇಕು, ಆನಂತರ ಕೃಷಿ ಚಟುವಟಿಕೆಗೆ ಬಳಸಬೇಕು. ಒಂದು ವೇಳೆ ನೀರು ಉಳಿದರೆ ಅದನ್ನು ಕಾರ್ಖಾನೆಗಳಿಗೆ ಕೊಡಬೇಕು ಎಂದು ಮಾಹಿತಿ ನೀಡಿದರು.ಗಮನಕ್ಕೆ ತಂದಿಲ್ಲ-ತಂಗಡಗಿ: ಈ ವಿಷಯಕ್ಕೆ ಸಂಬಂಧಿಸಿದಂತೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಅವರನ್ನು ''''ಕನ್ನಡಪ್ರಭ'''' ದೂರವಾಣಿ ಮೂಲಕ ಸಂಪರ್ಕಿಸಿದಾಗ, ಐಸಿಸಿ ಸಭೆಯಲ್ಲಿ ತಾವು ಕಾರ್ಖಾನೆಗಳಿಗೆ ನೀರು ಬಿಡಬಾರದು ಎಂದು ಘೋಷಣೆ ಮಾಡಿದ್ದನ್ನು ಒಪ್ಪಿಕೊಂಡರು. ಅಧಿಕಾರಿಗಳು ಕಾರ್ಖಾನೆಗೆ ನೀರು ಬಿಡುತ್ತಿರುವ ಮಾಹಿತಿ ನನಗೆ ಇಲ್ಲ. ನೀರು ಬಿಡುವ ಮುನ್ನ ನನ್ನ ಗಮನಕ್ಕೂ ತಂದಿಲ್ಲ, ನಾನು ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.ಮುಖ್ಯಮಂತ್ರಿಗೆ ದೂರು ನೀಡುತ್ತೇನೆ-ದೋಟಿಹಾಳ: ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಧಾರದ ವಿರುದ್ಧ ಅಧಿಕಾರಿಗಳು ಕಾರ್ಖಾನೆಗೆ ನೀರನ್ನು ಹರಿಸಿರುವುದು ಗಂಭೀರ ವಿಷಯವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತಾವು ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡುವುದಾಗಿ ಕಾಡಾ ಅಧ್ಯಕ್ಷರು ತಿಳಿಸಿದರು.ಅಧಿಕಾರಿಗಳ ಅಮಾನತು ಮಾಡುವ ವರೆಗೆ ಧರಣಿ-ಚಾಗ್ಭಾವಿ: ನೀರಾವರಿ ಸಲಹಾ ಸಮಿತಿ ಸಭೆಯು ಮಿನಿ ಕ್ಯಾಬಿನೆಟ್ ಮೀಟಿಂಗ್ ಇದ್ದಂತೆ, ಏಕೆಂದರೆ ಈ ಸಭೆಯಲ್ಲಿ ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸತ್ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸುತ್ತಾರೆ, ಅಂತಹ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ವಿರುದ್ಧವಾಗಿ ನೀರಾವರಿ ಇಲಾಖೆ ಅಧಿಕಾರಿಗಳು ಕಾರ್ಖಾನೆಗೆ ನೀರನ್ನು ಹರಿಸಿದ್ದು ಸರಿಯಲ್ಲ. ಕಾರ್ಖಾನೆಗಳಿಗೆ ನೀರನ್ನು ತಕ್ಷಣದಿಂದ ಬಂದ್ ಮಾಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡುವವರೆಗೆ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ಅಮರೇಶ್ ಚಾಗ್ಭಾವಿ ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಕರ್ನಾಟಕ ಅನ್ನದಾತ ರೈತ ಸಂಘ ರಾಜ್ಯಾಧ್ಯಕ್ಷ ಪ್ರಕಾಶ್ ತಿಮಲಾಪುರ್, ಗೌರವಾಧ್ಯಕ್ಷ ಖಾದ್ರಿ, ರೈತ ಮುಖಂಡರಾದ ಕೋಟಾಲ್ ವೀರೇಶ್, ಗಂಗಾಧರ್ ಹಾಗೂ ಲಕ್ಷ್ಮಿ ಬುಕ್ಕ ಸಾಗರ್ ಉಪಸ್ಥಿತರಿದ್ದರು.
ನೀರು ಹರಿಸಲಾಗುತ್ತಿದೆ: ನಾವು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಆದೇಶದ ಮೇರೆಗೆ ಸೆ. 1ರಿಂದ ಕಾರ್ಖಾನೆಗಳಿಗೆ ನೀರನ್ನು ಹರಿಸುತ್ತಿದ್ದೇವೆ. ಜಿಂದಾಲ್ ಕಾರ್ಖಾನೆಗೆ ಪ್ರತಿನಿತ್ಯ 30 ಕ್ಯುಸೆಕ್‌ನಂತೆ ಹಾಗೂ ಇತರ ಕಾರ್ಖಾನೆಗಳಿಗೆ 19.50 ಕ್ಯುಸೆಕ್‌ನಂತೆ ಒಟ್ಟಾರೆಯಾಗಿ 49.50 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ ಎಂದು ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಶ್ರೀನಿವಾಸ್ ಮಲ್ಲಿಗವಾಡ ಹೇಳಿದರು.