ಸಿಐಟಿಯು ನೇತೃತ್ವದಲ್ಲಿ ಡಿಸಿ ಕಛೇರಿ ಮುಂದೆ ಪ್ರತಿಭಟನೆ

| Published : Jan 24 2024, 02:00 AM IST

ಸಿಐಟಿಯು ನೇತೃತ್ವದಲ್ಲಿ ಡಿಸಿ ಕಛೇರಿ ಮುಂದೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಐಟಿಯು ನೇತೃತ್ವದಲ್ಲಿ ಸಾವಿರಾರು ಅಂಗನವಾಡಿ ನೌಕರರು, ಅಕ್ಷರ ದಾಸೋಹ ನೌಕರರು ಹಾಗೂ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಕಾಯಂಯೇತರ ನೌಕರರು ಮಂಗಳವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಹಾಸನ

ಸಿಐಟಿಯು ನೇತೃತ್ವದಲ್ಲಿ ಸಾವಿರಾರು ಅಂಗನವಾಡಿ ನೌಕರರು, ಅಕ್ಷರ ದಾಸೋಹ ನೌಕರರು ಹಾಗೂ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಕಾಯಂಯೇತರ ನೌಕರರು ಮಂಗಳವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಬೆಲೆ ಏರಿಕೆ ವಿರುದ್ಧ, ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ, ಸಂವಿಧಾನ ಮೌಲ್ಯಗಳ ರಕ್ಷಣೆಗಾಗಿ, ರೈತ ವಿರೋಧಿ ಕೃಷಿ ಕಾನೂನುಗಳ ವಾಪಸ್‌ಗಾಗಿ, ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತ್ರಿ ಜಾರಿಗಾಗಿ, ಕಾರ್ಮಿಕರಿಗೆ ಕನಿಷ್ಠ ವೇತನ ರು. 31000 ನಿಗದಿಗಾಗಿ, ಕನಿಷ್ಠ ರೂ.೬.೦೦೦ ಪಿಂಚಣಿಗಾಗಿ, ಅಂಗನವಾಡಿ ನೌಕರರ, ಗ್ರಾಪಂ ನೌಕರರ, ಬಿಸಿಯೂಟ ನೌಕರರ, ಪ್ಲಾಂಟೇಷನ್ ಕಾರ್ಮಿಕರ, ಆಸ್ಪತ್ರೆ, ಹಾಸ್ಟೆಲ್, ಕೈಗಾರಿಕೆ ಕಾರ್ಮಿಕರ ಬೇಡಿಕೆಗಳಿಗಾಗಿ, ಗೌರವಧನ, ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಪಡಿಸಿ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ, ನಿರುದ್ಯೋಗ ಮತ್ತು ಖಾಸಗೀಕರಣದ ನೀತಿಗಳನ್ನು ವಿರೋಧಿಸಿ ಜನವರಿ ೨೩ ರಿಂದ ೨೫ ರವರೆಗೆ ಸಂಸತ್ ಸದಸ್ಯರ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನಾ ಧರಣಿ ನಡೆಸಲಿದ್ದಾರೆ ಎಂದರು.

ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರ ೧೦ ವರ್ಷಗಳ ಆಡಳಿತವನ್ನು ಪೂರೈಸಿ ಮತ್ತೊಂದು ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದೆ. ಆದರೆ ಕಳೆದ ೧೦ ವರ್ಷಗಳಲ್ಲಿ ಜನರಿಗೆ ಒಳ್ಳೆಯ ದಿನಗಳು ಬರಲಿವೆ ಎನ್ನುವ ಭರವಸೆಯು ಮರೀಚಿಕೆಯಾಗಿಯೇ ಉಳಿಯಿತು.

ಶ್ರೀಮಂತರು ಅತಿದೊಡ್ಡ ಶ್ರೀಮಂತಾದರು. ಬಡವರು ಮತ್ತಷ್ಟು ಕಡುಬಡತನಕ್ಕೆ ತಳ್ಳಲ್ಪಟ್ಟರು. ದೇಶದ ಸಾಲ ೨೦೫ ಲಕ್ಷ ಕೋಟಿಗಳಿಗೆ ಏರಿತು. ಶ್ರೀಮಂತರ ೧೫ ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಯಿತು. ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡದೆ ಅವರ ಮೇಲಿನ ಸಾಲದ ಹೊರೆ ಇಳಿಸದೆ ಲಕ್ಷಗಟ್ಟಲೇ ರೈತರನ್ನು ಆತ್ಮಹತ್ಯೆಗೆ ದೂಡಲಾಯಿತು ಎಂದು ದೂರಿದರು.

ಕಾರ್ಮಿಕರ ಕಾನೂನುಗಳನ್ನು ಸಂಹಿತೆಗಳನ್ನಾಗಿಸಿ ಕಾರ್ಮಿಕರನ್ನು ಮತ್ತೆ ಗುಲಾಮಗಿರಿಗೆ ನೂಕಿ ಅತಿ ಕಡಿಮೆ ಕೂಲಿ ಮತ್ತು ಸೌಲಭ್ಯಗಳನ್ನು ನೀಡಿ ಅತಿಹೆಚ್ಚು ದುಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಕಾರ್ಪೊರೇಟ್ ಲೂಟಿಗೆ ಅವಕಾಶ ನೀಡಲಾಯಿತು. ನಿರುದ್ಯೋಗ ಮಟ್ಟ ಮಿತಿಮೀರಿ ಆಸ್ಪೋಟಕಾರಿ ಸ್ಥಿತಿಗೆ ತಲುಪಿತು. ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳ ಖಾಸಗೀಕರಣದಿಂದ ಸಾಮಾನ್ಯ ಜನರು ಉತ್ತಮ ಗುಣಮಟ್ಟದ ಹಾಗೂ ಏಕರೂಪದ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು ರಾಜ್ಯದಲ್ಲಿ ೨೦೧೨ ರಿಂದ ಅನುಷ್ಠಾನ ಮಾಡಲಾಗುತ್ತಿದೆ, ಪ್ರಸ್ತುತ ಮಿಷನ್ ವಾತ್ಸಲ್ಯ ಎಂಬ ಹೆಸರಿನಿಂದ ಪರಿಷ್ಕರಿಸಲಾಗಿದೆ. ಈ ಯೋಜನೆಯ ಮೂಲಕ ಸಾವಿರಾರು ಪಾಲನೆ, ಪೋಷಣೆ ಮತ್ತು ರಕ್ಷಣೆಯ ಅವಶ್ಯಕತೆ ಇರುವ ಅನಾಥ, ಪರಿತ್ಯಕ್ತ, ಶೋಷಣೆ ಮತ್ತ ಹಿಂಸೆಗಳಿಗೆ ಒಳಪಟ್ಟು ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳನ್ನು ಸಂರಕ್ಷಿಸಿ ಅವರ ಘನತೆಯ ಬದುಕಿನ ರಕ್ಷಣೆಗಾಗಿ ಶ್ರಮಿಸಲಾಗುತ್ತಿದೆ. ಮಕ್ಕಳ ಹಕ್ಕುಗಳ ಸಂರಕ್ಷಣಾ ಕಾರ್ಯವು ಶಾಸನಬದ್ಧ, ಅತೀ ಸೂಕ್ಷ್ಮ ಅಲ್ಲದೆ ಅತ್ಯಗತ್ಯ ಸೇವೆ ಒದಗಿಸುವ ಕ್ಷೇತ್ರವಾಗಿರುತ್ತದೆ. ಸರಾಸರಿ ೯೫ ರಷ್ಟು ಸಿಬ್ಬಂದಿಯನ್ನು ಆರಂಭದಲ್ಲಿ ಗುತ್ತಿಗೆ ಆಧಾರದಲ್ಲಿ ೨೦೧೫ರ ನಂತರ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗಿರುತ್ತದೆ. ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪದವಿ, ಕಾನೂನು ಪದವಿ ಮತ್ತು ಸ್ನಾತ್ತಕೋತ್ತರ ಪದವಿಯೊಂದಿಗೆ ಹತ್ತು ಹಲವು ವರ್ಷಗಳಿಂದ ಸೇವಾ ಅನುಭವ ಹೊಂದಿರುವ ಸಿಬ್ಬಂದಿ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದೇವೆ.

ಅಲ್ಲದೆ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಮಾಡುತ್ತಾ ಬಂದಿದ್ದೇವೆ. ೮ ವರ್ಷಗಳ ನಂತರ ಮಿಷನ್ ವಾತ್ಸಲ್ಯ ಯೋಜನೆ ಹೆಸರಿನಲ್ಲಿ ಪರಿಷ್ಕರಣೆಯಾಗಿರುವ ವೇತನವು ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಅತೀ ಕಡಿಮೆ ಇದೆ ಅಲ್ಲದೇ ಇನ್ನಿತರೆ ನಮ್ಮ ಬೇಡಿಕೆಗಳು ಇದುವರೆಗೆ ಈಡೇರಿರುವುದಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ಲೋಕಸಭಾ ಸದಸ್ಯರ ಕಚೇರಿಯ ಮುಂದೆ ಸ್ಟೀಮ್ ನೌಕರರೊಂದಿಗೆ ಧರಣಿ ಮಾಡಿ ಮನವಿ ಸಲ್ಲಿಸುತ್ತಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್, ಕ.ರಾ.ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಜಯಂತಿ, ಕ.ಪ್ರೊ.ಪ್ಲಾಂಟೇಷನ್ ಕಾರ್ಮಿಕರ ಸಂಘದ ಕಾರ್ಯದರ್ಶಿ ಸೌಮ್ಯ, ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಖಾಯಂಯೇತರ ನೌಕರರು ಸಂಘದ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಕರಾಗ್ರಾಪಂ ನೌಕರರ ಸಂಘದ ಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಜಿಲ್ಲಾ ಖಜಾಂಚಿ ಕಲಾವತಿ ಇತರರು ಉಪಸ್ಥಿತರಿದ್ದರು.