ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಎಂಡಿಎ ನಲ್ಲಿ ನಡೆದಿರುವ ಹಗರಣ ವಿರೋಧಿಸಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಕೆಆರ್ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಎಂಡಿಎ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.ಪ್ರತಿಭಟನೆ ನಡೆಸಿ, ಪಾದಯಾತ್ರೆ ಮೂಲಕ ಎಂಡಿಎ ಕಚೇರಿಗೆ ತೆರಳಲು ಗನ್ ಹೌಸ್ಬಳಿ ನೆರೆದಿದ್ದವರನ್ನು ಸಕಾರಣ ನೀಡದೆ ಬಂಧಿಸಲಾಯಿತು. ಈ ವಿಷಯ ತಿಳಿದ ಉಳಿದ ಪ್ರತಿಭಟನಾಕಾರರು ರೈಲ್ವೆ ನಿಲ್ದಾಣದ ಬಳಿ ಸೇರಿ, ಅಲ್ಲಿಂದಲೇ ನೇರವಾಗಿ ಎಂಡಿಎ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು.
ರಾಜ್ಯ ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುತ್ತ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರನ್ನು ಎಂಡಿಎ ಕಚೇರಿ ಸಮೀಪವೇ ಬಂಧಿಸಲು ಪೊಲೀಸರು ಮುಂದಾದರು. ಈ ವೇಳೆ ಯಾವ ಕಾರಣಕ್ಕೆ ನಮ್ಮನ್ನು ಬಂಧಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಪೊಲೀಸರ ಬಳಿ ಉತ್ತರವೇ ಇರಲಿಲ್ಲ. ಸಂವಿಧಾನ ರಕ್ಷಿಸುವುದಾಗಿ ಹೋದಲೆಲ್ಲಾ ಭಾಷಣ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಅದೇ ಸಂವಿಧಾನ ನೀಡಿರುವ ಶಾಂತಿಯುತ ಪ್ರತಿಭಟನೆ ತಡೆಯಲು ಪೊಲೀಸರನ್ನು ಬಳಸಿಕೊಂಡಿದ್ದಾರೆ. ಇಂತಹ ಕ್ರಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದು ಸಿದ್ದರಾಮಯ್ಯ ಅವರು ಭಾವಿಸಿದ್ದರೆ ಅದು ಅವರ ಮೂರ್ಖತನ ಎಂದು ರವಿ ಕೃಷ್ಣಾರೆಡ್ಡಿ ತೀಷ್ಣವಾಗಿ ಪ್ರತಿಕ್ರಿಯಿಸಿದರು.ಕೂಡಲೇ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ನ್ಯಾಯಯುತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಪೊಲೀಸರು ಕೆಆರ್ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಎಸ್.ಎಚ್. ಲಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್, ಕಾರ್ಯದರ್ಶಿ ರಘು ಜಾಣಗೆರೆ, ರಘುಪತಿ ಭಟ್, ವಿಜಯರಾಘವ ಮರಾಠೆ, ಎಸ್. ಮಂಜುನಾಥ್, ಕೆ.ಎಸ್. ಸೋಮಸುಂದರ್, ಎಂ. ರವಿಕುಮಾರ್, ಎಚ್. ಅರುಣ ಕುಮಾರ, ಜಿಲ್ಲಾಧ್ಯಕ್ಷ ಸುಂದರ್ ಪ್ರೇಮ್ ಕುಮಾರ್ ಮೊದಲಾದವರನ್ನು ಪೊಲೀಸರು ಬಂಧಿಸಿದರು.ರವಿ ಕೃಷ್ಣಾರೆಡ್ಡಿ ಮಾತನಾಡಿ, ಸಿದ್ದರಾಮಯ್ಯ ಅವರು 50:50 ಸಿಎಂ ಆಗಿದ್ದು, ಕೇವಲ ಮೂಡಾದಲ್ಲಿ ಅಕ್ರಮವಾಗಿ 50:50 ಸೈಟ್ ಪಡೆಯದೆ ವಿರೋಧ ಪಕ್ಷಗಳೊಂದಿಗೆ 50:50 ಅಡ್ಜಸ್ಟ್ ಮೆಂಟ್ ರಾಜಕೀಯ ಮಾಡುತ್ತಿದ್ದು ಅವರು ಸಾರ್ವಜನಿಕ ಜೀವನದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ, ಸೈಟಿಗಾಗಿ ಮಾರಾಟವಾಗಿರುವ ಜಮೀನನ್ನು ಬೇನಾಮಿ ಮೂಲಕ ಕೊಂಡುಕೊಂಡು, ದಾನಪತ್ರದ ಮೂಲಕ ಪತ್ನಿಯ ಹೆಸರಿಗೆ ವರ್ಗಾಯಿಸಿಕೊಂಡು, ಈಗ ಬಿಜೆಪಿಯವರು ಕೊಟ್ಟಿದ್ದಾರೆ, ನಾನು ತೆಗೆದುಕೊಂಡಿದ್ದೇನೆ ಎಂದು ನಿರ್ಲಜ್ಜೆಯಿಂದ ಮಾತನಾಡುತ್ತಿದ್ದಾರೆ. ಈ ಹಿಂದೆ ಅರ್ಕಾವತಿ ಪ್ರಕರಣದಿಂದ ಪಾರಾಗಲು ಲೋಕಾಯುಕ್ತವನ್ನು ಮುಚ್ಚಿದ ಅಪಖ್ಯಾತಿ ಹೊಂದಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಯಾಗಿ ಮಾಡಿ ಮತ್ತಷ್ಟು ಅಕ್ರಮಕ್ಕೆ ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಬಹುತೇಕ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಇದೇ ರೀತಿಯ ಅಕ್ರಮಗಳು, ಅವ್ಯವಹಾರಗಳು ನಡೆಯುತ್ತಿದ್ದು, ಲಕ್ಷಾಂತರ ಜನರು ನಿವೇಶನಕ್ಕಾಗಿ ಅರ್ಜಿ ಹಾಕಿಕೊಂಡು ಚಾತಕ ಪಕ್ಷಿಗಳಂತೆ ದಶಕಗಳ ಕಾಲ ಕಾಯುವ ಭಾಗ್ಯ ಹಾಗೂ ಗ್ಯಾರಂಟಿಗಳನ್ನು ನೀಡಿ ತಮಗೆ ಹಾಗೂ ತಮ್ಮ ಆಪ್ತರಿಗೆ ಮಾತ್ರ ಅಕ್ರಮವಾಗಿ ಸೈಟ್ ನೀಡಿಕೊಂಡು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಕ್ಷಣ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.