ವಕೀಲರ ಪ್ರತಿಭಟನಾ ಮೆರವಣಿಗೆ

| Published : Feb 16 2024, 01:45 AM IST

ಸಾರಾಂಶ

ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಸಬ್ ಇನ್ಸ್ ಪೆಕ್ಟರ್ ತನ್ವೀರ್ ರನ್ನು ಕೂಡಲೇ ಅಮಾನತುಗೊಳಿಸಬೇಕು. ವಕೀಲರ ಮೇಲಿನ ಎಫ್ ಐಆರ್ ರದ್ದುಪಡಿಸಿ, ಘಟನೆ ಕುರಿತು ತನಿಖೆ ನಡೆಸಬೇಕು. ಇಲ್ಲದಿದ್ದರೆ ವಿಧಾನಸೌಧ ಚಲೋ ನಡೆಸಬೇಕಾಗುತ್ತದೆ.

ವಕೀಲರ ಮೇಲಿನ ಎಫ್ಐಆರ್ ರದ್ದುಪಡಿಸಿ । ಪ್ರಕರಣದ ತನಿಖೆ ನಡೆಸಿ । ನ್ಯಾಯ ಸಿಗುವರೆಗೂ ಹೋರಾಟ ನಿಲ್ಲಲ್ಲ

ಕನ್ನಡಪ್ರಭ ವಾರ್ತೆ ರಾಮನಗರ

ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದು ಧರಣಿ ನಡೆಸುತ್ತಿದ್ದ ವಕೀಲರು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ವಕೀಲರ ಸಂಘದ ಆವರಣದಿಂದ ಮೆರವಣಿಗೆ ಹೊರಟ ವಕೀಲರು, ಪಿಎಸ್ ಐ ತನ್ವೀರ್ ವಿರುದ್ಧ ಘೋಷಣೆ ಕೂಗುತ್ತಾ ಐಜೂರು ವೃತ್ತಕ್ಕೆ ಆಗಮಿಸಿದರು. ಅಲ್ಲಿಂದ ಕೆಂಗಲ್ ಹನುಂತಯ್ಯ ವೃತ್ತದ ಮಾರ್ಗವಾಗಿ ಎಂ.ಜಿ ರಸ್ತೆ ಮೂಲಕ ಪೊಲೀಸ್ ಭವನಕ್ಕೆ ತೆರಳಿ ಧರಣಿ ಕುಳಿತರು.

ಈ ವೇಳೆ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಶಿವರಾಮು, ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಸಬ್ ಇನ್ಸ್ ಪೆಕ್ಟರ್ ತನ್ವೀರ್ ರನ್ನು ಕೂಡಲೇ ಅಮಾನತುಗೊಳಿಸಬೇಕು. ವಕೀಲರ ಮೇಲಿನ ಎಫ್ ಐಆರ್ ರದ್ದುಪಡಿಸಿ, ಘಟನೆ ಕುರಿತು ತನಿಖೆ ನಡೆಸಬೇಕು. ಇಲ್ಲದಿದ್ದರೆ ವಿಧಾನಸೌಧ ಚಲೋ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೊರಗಿನ ವ್ಯಕ್ತಿಗಳು ವಕೀಲರ ಸಂಘಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ, ವಕೀಲರ ಮೇಲೆ ಹಲ್ಲೆಗೆ ಮುಂದಾಗಿ ಗೂಂಡಾ ವರ್ತನೆ ತೋರಿದ್ದಾರೆ. ಮುಂದೆ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ಮಾಡುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ತಪ್ಪಿತಸ್ಥರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಕೀಲರ ವಿರುದ್ಧ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳು ಸೌಜನ್ಯಕ್ಕಾದರೂ ವಕೀಲರ ಸಂಘದೊಂದಿಗೆ ಚರ್ಚಿಸಬಹುದಿತ್ತು. ನಮ್ಮೊಂದಿಗೆಯೇ ಈ ರೀತಿ ನಡೆದುಕೊಳ್ಳುವ ಪೊಲೀಸರು, ಸಾಮಾನ್ಯ ಜನರೊಂದಿಗೆ ಹೇಗೆ ವರ್ತಿಸುತ್ತಾರೆ? ಈಗ ಪೊಲೀಸರು ನ್ಯಾಯವಾದಿಗಳ ಬದಲಿಗೆ ತಪ್ಪಿತಸ್ಥರ ರಕ್ಷಣೆಗೆ ನಿಂತಿದ್ದಾರೆ ಎಂದು ಟೀಕಿಸಿದರು.

ನಮ್ಮದು ವಕೀಲರ ಧರ್ಮ ಅದನ್ನು ಪಾಲನೆ ಮಾಡುತ್ತೇವೆ. ವಕೀಲರಿಗೆ ಕಳಂಕ ಅಂಟಿದರೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯೇ ಹೊರಟ ಹೋಗುತ್ತದೆ. ಶಾಂತಿಗೆ ಧಕ್ಕೆಯಾಗದಂತೆ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ. ಸಾರ್ವಜನಿಕರ ರಕ್ಷಣೆ ಜವಾಬ್ದಾರಿ ಹೊತ್ತಿರುವ ಕಾರಣ ಸುಮ್ಮನಿದ್ದೇವೆ. ಕರಿ ಕೋಟ್ ಹಾಕಿರುವ ಕಾರಣ ನಿಮ್ಮ ದರ್ಪ ದೌರ್ಜನ್ಯ ತಡೆದುಕೊಂಡು ಸುಮ್ಮನಿದ್ದೇವೆ. ಇಲ್ಲದಿದ್ದರೆ ನಮಗೂ ತಿರುಗಿ ಬೀಳಲು ಬರುತ್ತದೆ ಎಂದು ಎಚ್ಚರಿಸಿದರು.

ವಕೀಲರ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ವಕೀಲ ಚಾನ್‌ ಪಾಷ ಕೈವಾಡ ಇರುವುದು ಸ್ಪಷ್ಟವಾಗಿದೆ. ಆ ವಕೀಲನ ವಿರುದ್ಧ ಬಾರ್ ಕೌನ್ಸಿಲಿಂಗ್ ಗೆ ಪತ್ರ ಬರೆದು, ಅಮಾನತುಗೊಳಿಸಲಲು ಕ್ರಮವಹಿಸೋಣ. ಎಸ್ಸೈ ತನ್ವೀರ್ ಅಮಾನತು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವವರೆಗೂ ಹೋರಾಟ ಮುಂದುವರೆಸೋಣ. ಈ ಪ್ರಕರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಮಾಗಡಿ ಸಂಘದ ಅಧ್ಯಕ್ಷ ಪಾಪಣ್ಣ ಮಾತನಾಡಿ, ವಕೀಲರು ಪ್ರತಿಭಟಿಸಿದರೆ ರಾಜ್ಯಾದ್ಯಂತ ಗಲಾಟೆಗಳಾಗುತ್ತವೆ. ಅದಕ್ಕೆಲ್ಲ ಅವಕಾಶ ನೀಡದೆ ಸೌಹಾರ್ದಯುತವಾಗಿ ಸಮಸ್ಯೆ ಬಗೆ ಹರಿಸಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕನಕಪುರ ವಕೀಲರ ಸಂಘ ಅಧ್ಯಕ್ಷ ಚನ್ನೇಗೌಡ, ಹಿರಿಯ ವಕೀಲ ಸುಬ್ಬಾಶಾಸ್ತ್ರಿ ಮಾತನಾಡಿದರು. ಜಿಲ್ಲಾ ವಕೀಲರ ಸಂಘ ಕಾರ್ಯದರ್ಶಿ ತಿಮ್ಮೇಗೌಡ, ಖಜಾಂಚಿ ಮಂಜೇಶ್ ಗೌಡ, ಹಿರಿಯ ವಕೀಲ ಶಿವಣ್ಣಗೌಡ, ಶಾಂತಪ್ಪ, ಚನ್ನಪಟ್ಟಣ ವಕೀಲರ ಸಂಘ ಅಧ್ಯಕ್ಷ ಗಿರೀಶ್ ಮತ್ತಿತರರು ಭಾಗವಹಿಸಿದ್ದರು.

---------------------------------------

15ಕೆಆರ್ ಎಂಎನ್‌ 6.ಜೆಪಿಜಿ

ರಾಮನಗರದಲ್ಲಿ ವಕೀಲರು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

----------------------------------------