ಗೋಕಾಕ ಜಿಲ್ಲೆಗೆ ಆಗ್ರಹಿಸಿ ಇಂದು ಪ್ರತಿಭಟನಾ ಮೆರವಣಿಗೆ

| Published : Nov 12 2024, 12:45 AM IST / Updated: Nov 12 2024, 12:46 AM IST

ಸಾರಾಂಶ

ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ಮಂಗಳವಾರ ಬೆಳಗ್ಗೆ 10.30ಕ್ಕೆ ಬಸವೇಶ್ವರ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ಮಾಡಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಹೋರಾಟ ಚಾಲನಾ ಸಮಿತಿ ಅಧ್ಯಕ್ಷ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ಮಂಗಳವಾರ ಬೆಳಗ್ಗೆ 10.30ಕ್ಕೆ ಬಸವೇಶ್ವರ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ಮಾಡಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಹೋರಾಟ ಚಾಲನಾ ಸಮಿತಿ ಅಧ್ಯಕ್ಷ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಭಾನುವಾರ ಸಂಜೆ ನಗರದ ಶೂನ್ಯಸಂಪಾದನ ಮಠದಲ್ಲಿ ಸುದ್ದಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ದಶಕಗಳಿಂದ ನಡೆಯುತ್ತಿರುವ ಹೋರಾಟಕ್ಕೆ ತೀವ್ರಗತಿ ನೀಡುವ ನಿಟ್ಟಿನಲ್ಲಿ ಮಂಗಳವಾರದಂದು ಸಾಂಕೇತಿಕವಾಗಿ ಧರಣಿ ನಡೆಸುವ ಮೂಲಕ ಚಾಲನೆ ನೀಡಲಾಗುವುದು. ನಗರದ ಎಲ್ಲಾ ಸಂಘಟನೆಗಳು, ವ್ಯಾಪಾರಸ್ಥರು, ಕನ್ನಡ ಪರ ಸಂಘಟನೆಗಳು, ರೈತಪರ ಸಂಘಟನೆಗಳು ಸೇರಿದಂತೆ ತಾಲೂಕಿನ ವಿವಿಧ ಸ್ಥರಗಳ ಸಂಘಟನೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ 4 ದಶಕಗಳಿಂದ ಹೋರಾಟ ನಡೆಯುತ್ತಿದೆ. ಆಯೋಗಗಳು ಸಹ ಗೋಕಾಕ ಜಿಲ್ಲೆಗೆ ಸಹಮತ ನೀಡಿವೆ. ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಹೋರಾಟ ಸೌಮ್ಯವಾಗಿದೆ. ಜನಸಾಮಾನ್ಯರು ಸಂಶಯ ದೃಷ್ಟಿಯಿಂದ ಈ ಹೋರಾಟ ನೋಡುತ್ತಿದ್ದಾರೆ. ಹಾಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಸಚಿವರು ಮತ್ತು ಶಾಸಕರು ಒಗ್ಗಟಿನಿಂದ ಇದಕ್ಕೆ ಬೆಂಬಲ ನೀಡಬೇಕು. ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ನಮ್ಮ ಧ್ವನಿಗೆ ಧ್ವನಿಯಾಗಬೇಕು. ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಅವರು ಸಹ ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕೋಟಗಿ, ವಕೀಲ ಸಿ.ಡಿ. ಹುಕ್ಕೇರಿ, ಬಸವರಾಜ ಖಾನಪ್ಪನವರ , ಸದಾಶಿವ ಗುದಗಗೋಳ, ದಸ್ತಗಿರಿ ಪೈಲ್ವಾನ್‌ , ಅರ್ಜುನ್ ಪಂಗನ್ನವರ ಇದ್ದರು.