ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನಾ ಸಭೆ

| Published : Sep 04 2025, 01:00 AM IST

ಸಾರಾಂಶ

ಶೃಂಗೇರಿ, ಪಟ್ಟಣದ ವಲಯಾರಣ್ಯಧಿಕಾರಿಗಳ ಕಚೇರಿ ಎದುರು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿಯಿಂದ ಕಾಡಾನೆ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಪ್ರತಿಭಟನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪಟ್ಟಣದ ವಲಯಾರಣ್ಯಧಿಕಾರಿಗಳ ಕಚೇರಿ ಎದುರು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿಯಿಂದ ಕಾಡಾನೆ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಪ್ರತಿಭಟನಾ ಸಭೆ ನಡೆಯಿತು.

ಸಮಿತಿ ಅಧ್ಯಕ್ಷ ಅಂಬಳೂರು ರಾಮಕೃಷ್ಣ ಮಾತನಾಡಿ ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ರೈತರ ಜಮೀನು ಹಾಗೂ ಬೆಳೆಗಳು ಹಾಳಾಗುತ್ತಿವೆ. ಜನರು ಜೀವ ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಲೆನಾಡಿನಲ್ಲಿ ಒಂದೆಡೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆಗಳು ನಾಶವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನೊಂದೆಡೆ ಕಾಡಾನೆಗಳು ದಾಳಿ ನಡೆಸುತ್ತಿವೆ. ಎಲ್ಲವನ್ನು ಕಾನೂನು ವ್ಯಾಪ್ತಿಯೊಳಗೆ ತರಲು ಸಾಧ್ಯವಿಲ್ಲ. ಇದು ಜನರ ಜೀವನದ ಪ್ರಶ್ನೆ. ಪಟಾಕಿ ಸಿಡಿಸಿ ಆನೆಯನ್ನು ಓಡಿಸಿದರೆ ಸಾಲದು. ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ನೀಡುವಂತೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಳ್ಳಿಗಾಡು ಪ್ರದೇಶಗಳಲ್ಲಿ ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು ಓಡಾಡಲು ಭಯಪಡುವ ಪರಿಸ್ಥಿತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಶಾಂತಿ ಕದಡುವ ಮುನ್ನ ಕ್ಷೇತ್ರದ ಶಾಸಕರು ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಲಯಾರಣ್ಯಧಿಕಾರಿ ಮಧುಕರ್ ಮಾತನಾಡಿ ಈ ಬಗ್ಗೆ ಸರ್ಕಾರದಿಂದ ನಮಗೆ ಯಾವುದೇ ಆದೇಶವಿಲ್ಲ. ಆನೆ ಕಂಡು ಬಂದಲ್ಲಿ ಓಡಿಸಲಾಗುತ್ತಿದೆ. ಈಗಾಗಲೇ ಟಾಸ್ಕ್ ಫೋರ್ಸ್ ಪಡೆ ಇದೆ. ಆನೆ ಹಿಡಿಯುವ ಬಗ್ಗೆ ಹೆಚ್ಚಿನ ಕ್ರಮ ಕೈ ಗೊಳ್ಳುವ ಬಗ್ಗೆ ಪ್ರಯತ್ನಿಸಬಹುದಾಗಿದೆ ಎಂದರು.

ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಗೋಳುಗೋಡು ಚಂದ್ರಶೇಖರ್, ನಾಗೇಶ್ ನಾಯಕ್ ಮಾರನ ಕೊಡಿಗೆ ಕೆ.ಎಸ್.ರಮೇಶ್, ಕೆ.ಎಂ.ಶ್ರೀನಿವಾಸ್, ಅಂಗುರ್ಡಿ ದಿನೇಶ್, ಡಿಸಿ ಶಂಕ್ರಪ್ಪ, ಭರತ್ ಗಿಣಕಲ್, ನೂತನ್ ಕುಮಾರ್, ವೇಣುಗೋಪಾಲ್, ಎಚ್.ಎಸ್.ಸುಬ್ರಮಣ್ಯ, ಆಗುಂಬೆ ಗಣೇಶ್ ಹೆಗ್ಡೆ ಮತ್ತಿತರರು ಹಾಜರಿದ್ದರು.

3 ಶ್ರೀ ಚಿತ್ರ 1-

ಶೃಂಗೇರಿ ವಲಯಾರಣ್ಯಾಧಿಕಾರಿಗಳ ಕಚೇರಿ ಎದುರು ಕಾಡಾನೆ ಹಾವಳಿ ನಿಯಂತ್ರಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನಾ ಸಭೆ ನಡೆಯಿತು.