Protest meeting demanding resolution of result-related issues

-ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ಖುದ್ದು ಸ್ಥಳಕ್ಕೆ ಧಾವಿಸಿದ ಶಾಸಕ ವಿಜಯೇಂದ್ರ

--

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಕುವೆಂಪು ವಿವಿ ವಿದ್ಯಾರ್ಥಿಗಳು ಪ್ರತಿ ಬಾರಿ ಸೆಮಿಸ್ಟರ್ ಪರೀಕ್ಷೆ ಹಾಗೂ ಫಲಿತಾಂಶದಲ್ಲಿ ವಿವಿಧ ರೀತಿ ಸಮಸ್ಯೆ ಎದುರಿಸುತ್ತಿದ್ದು, ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಗಂಭೀರ ಪರಿಣಾಮ ಎದುರಿಸಬೇಕಾಗಲಿದೆ ಎಂದು ಎಬಿವಿಪಿ ಸಂಘಟನಾ ಕಾರ್ಯದರ್ಶಿ ಆದಿತ್ಯ ಪಿ ಶೆಟ್ಟಿ ಎಚ್ಚರಿಸಿದರು.

ತಾಲೂಕು ಕಚೇರಿ ಮುಂಭಾಗ ಎಬಿವಿಪಿ ನೇತೃತ್ವದಲ್ಲಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕುವೆಂಪು ವಿ.ವಿ ದಲ್ಲಿನ ಪರೀಕ್ಷಾ ವಿಧಾನ ಹಾಗೂ ಫಲಿತಾಂಶದ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ, ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕುವೆಂಪು ವಿ.ವಿ., ವಿದ್ಯಾರ್ಥಿಗಳ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದು, ಪರೀಕ್ಷಾ ಫಲಿತಾಂಶ ಹಾಗೂ ಅಂಕಪಟ್ಟಿಯನ್ನು ಡಿಜಿಟಲೈಸೇಶನ್ ನಿಂದ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದ ಅವರು ಪರೀಕ್ಷೆಯಲ್ಲಿ ಹಾಜರಾಗಿದ್ದರೂ ಗೈರು ಎಂದು ತೋರಿಸುವ ಜತೆಗೆ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬ, ಅಂಕಗಳ ವ್ಯತ್ಯಾಸ, ಡಿಜಿಟಲ್ ಮೌಲ್ಯ ಮಾಪನದಲ್ಲಿನ ದೋಷ, ಯುಯುಸಿಎಂಎಸ್ ಪೋರ್ಟಲ್ ನಲ್ಲಿನ ತಾಂತ್ರಿಕ ಸಮಸ್ಯೆ, ಮರುಮೌಲ್ಯ ಮಾಪನ, ಮರು ಎಣಿಕೆ, ಫಲಿತಾಂಶದಲ್ಲಿನ ವಿಳಂಬ, ಪರೀಕ್ಷಾ ಶುಲ್ಕಕ್ಕೆ ಸಂಬಂಧಿಸಿದ ಹಲವು ರೀತಿಯ ಸಮಸ್ಯೆಗಳಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದು ದೂರಿದರು.

2024 ರಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಘಟಿಕೋತ್ಸವದ ಪ್ರಮಾಣ ಪತ್ರವಿಲ್ಲದೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ತೀವ್ರ ನಿರಾಶರಾಗಿದ್ದಾರೆ ಅಂಕಪಟ್ಟಿಯಲ್ಲಿನ ದೋಷಪೂರಿತ ಹೆಸರು, ಹಲವು ವಿಷಯಗಳಿಗೆ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಪಾಠ ವಿಲ್ಲದೆ ನೇರವಾಗಿ ಪರೀಕ್ಷೆ ಬರೆಯಬೇಕಾದ ಸವಾಲನ್ನು ಎದುರಿಸಬೇಕಾಗಿದೆ.

ಡಿಜಿಟಲ್ ಮೌಲ್ಯ ಮಾಪನದಿಂದಾಗಿ 1-2 ಅಂಕದಿಂದ ಅನುತ್ತೀರ್ಣರಾಗುತ್ತಿರುವ ವಿದ್ಯಾರ್ಥಿಗಳು ಮರು ಮೌಲ್ಯ ಮಾಪನಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ವಿಶ್ವ ವಿದ್ಯಾಲಯಕ್ಕೆ ಅನುದಾನವಿಲ್ಲದೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗುತ್ತಿದೆ. ಹಾಸ್ಟೆಲ್ ಗಳಲ್ಲಿ 200ರ ಬದಲಿಗೆ 400-500 ವಿದ್ಯಾರ್ಥಿಗಳನ್ನು ತುಂಬಲಾಗುತ್ತಿದೆ ಎಂದು ದೂರಿದ ಅವರು ಗ್ರಾಮೀಣ ಸಾರಿಗೆ ವ್ಯವಸ್ಥೆ ತೀವ್ರ ಹದಗೆಟ್ಟಿದ್ದು, ಸಕಾಲದಲ್ಲಿ ಬಸ್ ಕೊರತೆಯಿಂದ ಶಾಲಾ-ಕಾಲೇಜಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದು ವ್ಯವಸ್ಥೆಯಲ್ಲಿನ ಲೋಪ ಸರಿಪಡಿಸದಿದ್ದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ಖುದ್ದು ಸ್ಥಳಕ್ಕೆ ಧಾವಿಸಿದ ಶಾಸಕ ವಿಜಯೇಂದ್ರ ಮಾತನಾಡಿ, ಪರೀಕ್ಷೆ, ಮೌಲ್ಯ ಮಾಪನ ಡಿಜಟಲೀಕರಣದ ಲೋಪ, ಹಾಸ್ಟೆಲ್ ಸಮಸ್ಯೆ, ಬಸ್ ಸಮಸ್ಯೆ ಸಹಿತ ವಿದ್ಯಾರ್ಥಿಗಳ ಎಲ್ಲ ರೀತಿಯ ಸಮಸ್ಯೆ ಪರಿಹಾರಕ್ಕೆ ದ್ವನಿಯಾಗಿ ಸ್ಪಂದಿಸುವುದಾಗಿ ತಿಳಿಸಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಮುಂದಿನ 40-50 ವರ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಹಲವು ಕಾಲೇಜು ಹಾಸ್ಟೇಲ್‌ ಸೌಲಭ್ಯ ಕಲ್ಪಿಸಲಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಕೈಗೊಂಡ ಕ್ರಮದ ಪರಿಣಾಮ ಅಕ್ಕಪಕ್ಕದ ತಾಲೂಕಿನ ಹಲವು ವಿದ್ಯಾರ್ಥಿಗಳು ದಾಖಲಾಗಿದ್ದರಿಂದ ಹಾಸ್ಟೇಲ್‌ ಭರ್ತಿಯಾಗಿದೆ. ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲಿಯೇ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಭರವಸೆ ನೀಡಿದರು.

ನಂತರ ವಿದ್ಯಾರ್ಥಿಗಳು ಶಾಸಕರ ಸಹಿತ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾ.ಎಬಿವಿಪಿ ಸಂಚಾಲಕ ರಂಗನಾಥ್ ಸಹಸಂಚಾಲಕ ದರ್ಶನ್, ಕಾರ್ಯದರ್ಶಿ ಮಂಜು ಕಾರ್ಯಕರ್ತ ಚೇತನ್, ಹರ್ಷ, ಚೇತನ್ ಕುಮಾರ್, ರಕ್ಷಿತಾ, ಕೀರ್ತನಾ, ಅನನ್ಯಾ, ದೀಪಿಕಾ, ಐಶ್ವರ್ಯ ಇದ್ದರು.

ಫೋಟೋ:17 ಕೆ.ಎಸ್.ಕೆ.ಪಿ 4

ಪರೀಕ್ಷಾ ಮೌಲ್ಯ ಮಾಪನ, ಅಂಕಪಟ್ಟಿ ಡಿಜಿಟಲೀಕರಣ ಸಹಿತ ಹಲವು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಗುರುವಾರ ಎಬಿವಿಪಿ ನೇತೃತ್ವದಲ್ಲಿ ನಡೆದ ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸರ್ಕಾರಕ್ಕೆ ಶಾಸಕ ವಿಜಯೇಂದ್ರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.