ವಕ್ಫ್ ಸಂಸ್ಥೆ ಹೆಸರು ನಮೂದಿಸದಂತೆ ಪ್ರತಿಭಟನೆ: ರೈತರ ಮನವೊಲಿಸಿದ ತಹಸೀಲ್ದಾರ್

| Published : Nov 07 2024, 12:37 AM IST

ವಕ್ಫ್ ಸಂಸ್ಥೆ ಹೆಸರು ನಮೂದಿಸದಂತೆ ಪ್ರತಿಭಟನೆ: ರೈತರ ಮನವೊಲಿಸಿದ ತಹಸೀಲ್ದಾರ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ನೂರಾರು ರೈತರು ಬುಧವಾರ ಪ್ರತಿಭಟನೆಗೆ ಮುಂದಾಗಿದ್ದರು. ತಹಸೀಲ್ದಾರ್ ಫೀರೋಜ್‌ಷಾ ಸೋಮನಕಟ್ಟೆ ರೈತರನ್ನು ಸಮಾಧಾನ ಪಡಿಸಿ ತಮ್ಮ ಸಭಾಂಗಣದಲ್ಲಿ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ರೈತರ ಹೆಸರಿನಲ್ಲಿರುವ ಪಹಣಿಗಳಲ್ಲಿ ವಕ್ಫ್ ಸಂಸ್ಥೆ ಹೆಸರು ನಮೂದಿಸದಂತೆ ಹಾಗೂ ಮೂಲ ದಾಖಲಾತಿ ಪರಿಶೀಲಿಸುವ ಮುನ್ನವೇ ಯಾವುದೇ ತಿದ್ದುಪಡಿ ಮಾಡದಂತೆ ಆಗ್ರಹಿಸಿ ರಾಜ್ಯರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಯತ್ನಿಸಿದ ಘಟನೆ ತಹಸೀಲ್ದಾರ್ ಕಾರ್ಯಾಲಯ ಬಳಿ ನಡೆಯಿತು.ರೈತರ ಹೆಸರಿನಲ್ಲಿರುವ ಪಹಣಿಗಳಲ್ಲಿ 112 ಪ್ರಕರಣಗಳನ್ನು ವಕ್ಫ್ ಹೆಸರಿಗೆ ನಮೂದಿಸಲಾಗುತ್ತಿದೆ ಎಂಬ ಸುದ್ದಿಯೊಂದು ರೈತರ ನಿದ್ದೆಗೆಡಿಸಿತ್ತು. ಹೀಗಾಗಿ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ನೂರಾರು ರೈತರು ಬುಧವಾರ ಪ್ರತಿಭಟನೆಗೆ ಮುಂದಾಗಿದ್ದರು. ಕೂಡಲೇ ತಹಸೀಲ್ದಾರ್ ಫೀರೋಜ್‌ಷಾ ಸೋಮನಕಟ್ಟೆ ರೈತರನ್ನು ಸಮಾಧಾನ ಪಡಿಸಿ ತಮ್ಮ ಸಭಾಂಗಣದಲ್ಲಿ ಸಭೆ ನಡೆಸಿದರು.

ಆಸ್ತಿ ಬಿಟ್ಟುಕೊಡುವುದಿಲ್ಲ: ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಒಟ್ಟು 112 ಪ್ರಕರಣಗಳಲ್ಲಿ ಕಾಲಂ ನಂ. 11ರಲ್ಲಿ ವಕ್ಫ್ ಸಂಸ್ಥೆ ಹೆಸರು ನಮೂದಿಸಲು ಮುಂದಾಗಿದ್ದೀರಿ ಎಂದು ಆರೋಪಿಸಿದ ಅವರು, ಬ್ಯಾಡಗಿ ಸೇರಿದಂತೆ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಇಂತಹ ತಿದ್ದುಪಡಿಗೆ ಮುಂದಾದಲ್ಲಿ ಅನ್ಯಾಯಕ್ಕೊಳಪಟ್ಟ ಕುಟುಂಬಗಳ ಜೊತೆ ರೈತ ಸಂಘ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಿದೆ. ಯಾವುದೇ ಕಾರಣಕ್ಕೂ ಆಸ್ತಿ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಕೈಬಿಟ್ಟಿದ್ದೇವೆ ತಹಸೀಲ್ದಾರ್ ಸ್ಪಷ್ಟನೆ

ಇದಕ್ಕೆ ಪ್ರತಿಕ್ರಯಿಸಿದ ತಹಸೀಲ್ದಾರ್ ಜಿಲ್ಲಾಧಿಕಾರಿ ಆದೇಶದಂತೆ ಒಟ್ಟು 112 ಪ್ರಕರಣಗಳಲ್ಲಿ ವಕ್ಫ್ ಸಂಸ್ಥೆ ಹೆಸರು ನಮೂದಿಸುವಂತೆ ಸೂಚಿಸಿದ್ದರು. ಇದರಂತೆ 40 ಪ್ರಕರಣಗಳಲ್ಲಿ ವಕ್ಫ್ ಸಂಸ್ಥೆ ಹೆಸರೂ ನಮೂದಿಸಲಾಗಿತ್ತು. ಆದರೆ, ಜಿಲ್ಲಾಧಿಕಾರಿ ಪುನರ್ ಮೂಲ ದಾಖಲಾತಿಯಂತೆ ಪಹಣಿಯಲ್ಲಿ ಹೆಸರು ಸೂಚಿಸುವಂತೆ ಆದೇಶದಿಸಿದ ಹಿನ್ನೆಲೆಯಲ್ಲಿ ಕಾಲಂ. 11ರಲ್ಲಿದ್ದ ವಕ್ಫ್ ಸಂಸ್ಥೆ ಹೆಸರನ್ನು ಕೈಬಿಡಲಾಗಿದೆ ಎಂದರು.

ಅರ್ಜಿ ಸಲ್ಲಿಸಿದ 8500 ರೈತರಿಗೆ ನ್ಯಾಯಕೊಡಿಸಿ

ಈ ವೇಳೆ ಮಾತನಾಡಿದ ರೈತ ಸಂಘದ ಗಂಗಣ್ಣ ಎಲಿ ಮಾತನಾಡಿ, ಬೆಳೆ ವಿಮೆ ತುಂಬಿ ವರ್ಷವಾಗಿದ್ದು, ಈ ವರೆಗೂ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ. ಕಳೆದ 15 ದಿನಗಳಿಂದ ಸತತ ಮಳೆಯಿಂದ ಹಾನಿಗೊಂಡ ಸುಮಾರು 8500 ರೈತರು ಬೆಳೆವಿಮೆ ಹಾಗೂ ಬೆಳೆಹಾನಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಬೆಳೆ ವಿಮೆ ಕಂಪನಿ ನೀತಿಯಂತೆ ಹಾನಿಗೊಂಡ 3 ದಿನದೊಳಗೆ ರೈತರು ಅರ್ಜಿ ಸಲ್ಲಿಸಬೇಕು. ಬಳಿಕ ಪರಿಶೀಲನೆ ನಡೆಸಿ 7 ದಿನದಲ್ಲಿ ವಿಮೆ ಮೊತ್ತವನ್ನು ಜಮೆ ಮಾಡಬೇಕಿದೆ. ಆದರೆ, 15 ದಿನ ಗತಿಸಿದರೂ ರೈತರಿಗೆ ನ್ಯಾಯ ದೊರಕಲಿಲ್ಲ. ಮತ್ತೆ ರೈತರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸುತ್ತೇವೆ ಎಂದು ಸಭೆಯಲ್ಲಿ ಎಚ್ಚರಿಸಿದರು.

ಪರಿಶೀಲನೆ ಕಾರ್ಯ ನಡೆದಿದೆ

ಈಗಾಗಲೇ ತಾಲೂಕಿನ 8500 ಅರ್ಜಿಗಳ ಪರಿಶೀಲನೆ ಕಾರ್ಯ ನಡೆದಿದೆ. ಆದರೆ, ಒಂದೇ ಅರ್ಜಿಯಲ್ಲಿ ಬೆಳೆವಿಮೆ ಹಾಗೂ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ವಿಮೆ ತುಂಬಿದ ಪಾವತಿ ಇಲ್ಲವಾಗಿದೆ. ಪರಿಶೀಲನೆ ಕಾರ್ಯ ಭರದಿಂದ ಸಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಇತ್ಯಾದಿ ನೌಕರರ ಸಮಸ್ಯೆಯಿಂದ ಅನಿವಾರ್ಯವಾಗಿ ವಿಳಂಬವಾಗಿದೆ. ಎನ್‌ಡಿಆರ್‌ಎಫ್ ಗೈಡ್‌ಲೈನ್ಸ್ ಪಾಲನೆ ನಡೆದಿದ್ದು, 7800 ಹೆಕ್ಟೇರ್ ಹಾನಿ ವರದಿ ನೀಡಿದ್ದೇವೆ. ಎರಡು ದಿನಗಳಲ್ಲಿ ಎಲ್ಲ ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ವರದಿ ಸಮೇತ ಕಳುಹಿಸುತ್ತೇವೆ. ವಿಮೆ ಕಂಪನಿಯವರಿಗೆ ಇಷ್ಟೊಂದು ತ್ವರಿತ ಅವಧಿಯಲ್ಲಿ ಬೆಳೆ ಪರಿಶೀಲನೆ ಕಷ್ಟಸಾಧ್ಯವಾಗಿದ್ದು, ಸಾಂಕೇತವಾಗಿ ಕೆಲ ಅರ್ಜಿಗಳ ಪರಿಶೀಲನೆ ನಡೆಸಿದ ಬಳಿಕ ನ್ಯಾಯ ಒದಗಿಸುವುದಾಗಿ ತಿಳಿಸಿದರು.

ಈ ವೇಳೆ ಕಿರಣ ಗಡಿಗೋಳ, ಮೌನೇಶ ಕಮ್ಮಾರ, ಶಂಕರ ಮರಗಾಲ, ಶಿವರುದ್ರಪ್ಪ ಮೂಡೇರ, ಮಲ್ಲೇಶಪ್ಪ ಡಂಬಳ, ಪ್ರಕಾಶ ಸಿದ್ದಮ್ಮನವರ, ನಂಜುಂಡಸ್ವಾಮಿ ಮೋಟೆಬೆನ್ನೂರು, ಚನ್ನಬಸಪ್ಪ ತಳಮನಿ ಇನ್ನಿತರರಿದ್ದರು.