ವಿವಿಧ ಬೇಡಿಕೆ ಈಡೇರಿಕೆಗಾಗಿ ಬ್ಯಾಂಕ್ ನೌಕರರ ಪ್ರತಿಭಟನೆ

| Published : Feb 23 2025, 12:34 AM IST

ವಿವಿಧ ಬೇಡಿಕೆ ಈಡೇರಿಕೆಗಾಗಿ ಬ್ಯಾಂಕ್ ನೌಕರರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕುಗಳಲ್ಲಿ ಅಗತ್ಯ ನೇಮಕಾತಿ ಮಾಡಬೇಕು, ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು, ತಾತ್ಕಾಲಿಕ ನೌಕರರನ್ನು ಕಾಯಂಗೊಳಿಸಬೇಕು, ಉದ್ಯೋಗ ಭದ್ರತೆ ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಎನ್‌.ಆರ್‌. ವೃತ್ತದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಂದೆ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಹಾಸನ ಜಿಲ್ಲಾ ಘಟಕದಿಂದ ನೌಕರರು ಶನಿವಾರ ಪ್ರತಿಭಟಿಸಿ ಘೋಷಣೆ ಕೂಗಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಮುಂಬರುವ ಮಾರ್ಚ್ ತಿಂಗಳ ೨೪ ಮತ್ತು ೨೫ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಬ್ಯಾಂಕುಗಳಲ್ಲಿ ಅಗತ್ಯ ನೇಮಕಾತಿ ಮಾಡಬೇಕು, ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು, ತಾತ್ಕಾಲಿಕ ನೌಕರರನ್ನು ಕಾಯಂಗೊಳಿಸಬೇಕು, ಉದ್ಯೋಗ ಭದ್ರತೆ ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಎನ್‌.ಆರ್‌. ವೃತ್ತದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಂದೆ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಹಾಸನ ಜಿಲ್ಲಾ ಘಟಕದಿಂದ ನೌಕರರು ಶನಿವಾರ ಪ್ರತಿಭಟಿಸಿ ಘೋಷಣೆ ಕೂಗಿದರು.

ಬ್ಯಾಂಕ್ ಉದ್ಯೋಗಿಗಳ ಮೇಲಾಗುತ್ತಿರುವ ದಾಳಿಯಿಂದ ನೌಕರರನ್ನು ರಕ್ಷಿಸಬೇಕು, ಐಡಿಬಿಐ ಬ್ಯಾಂಕಿನಲ್ಲಿ ಸರ್ಕಾರಿ ಬಂಡವಾಳ ಶೇಕಡಾ ೫೧ಕ್ಕಿಂತ ಹೆಚ್ಚಿರಬೇಕು, ಬ್ಯಾಂಕಿಂಗ್ ಸೇವೆಗಳನ್ನು ಹೊರಗುತ್ತಿಗೆ ನೀಡಬಾರದು ಹಾಗೂ ಇನ್ನಿತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಹಾಸನ ಜಿಲ್ಲಾ ಸಮಿತಿಯ ವತಿಯಿಂದ ಬ್ಯಾಂಕ್ ನೌಕರರು ಹಾಗೂ ಅಧಿಕಾರಿ ಸಮೂಹ ನಗರದ ಎನ್ ಆರ್‌ ಸರ್ಕಲ್ ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಭಾಗ ಪ್ರತಿಭಟನಾ ಪ್ರದರ್ಶನ ನಡೆಸಿದರು.

ಜಿಲ್ಲಾ ಸಂಚಾಲಕ ಕುಮಾರ್ ಮಾತನಾಡಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಮುಂಬರುವ ಮಾರ್ಚ್ ತಿಂಗಳ ೨೪ ಮತ್ತು ೨೫ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಮುಷ್ಕರಕ್ಕೆ ಪೂರ್ವಭಾವಿಯಾಗಿ ಇಂದು ದೇಶಾದ್ಯಂತ ಬ್ಯಾಂಕ್ ಉದ್ಯೋಗಿಗಳಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಈ ಪ್ರತಿಭಟನಾ ಪ್ರದರ್ಶನ ಆಯೋಜಿಸಲಾಗಿದೆ. ಸರ್ಕಾರವು ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು ಹಾಗೂ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಷ್ಕರವು ಅನಿವಾರ್ಯವಾಗಲಿದೆ ಎಂದರು.

ಮುಷ್ಕರದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೌಕರರ ಸಂಘದಿಂದ ಕಾಂ. ಈ.ಟಿ. ಲೋಕೇಶ್, ಜಯಚಂದ್ರ, ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘದ ಜಾವಿದ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಸಂಘದಿಂದ, ಸೂರಜ್ ಸಿಂಗ್, ಅಶೋಕ್ ಭಟ್ ಹಾಗೂ ಕರ್ನಾಟಕ ಬ್ಯಾಂಕ್ ಅಧಿಕಾರಿಗಳ ಸಂಘದಿಂದ ಕಾಂ. ನಂದಗೋಪಾಲ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿ ಭಾಗವಹಿಸಿದ್ದರು.