ಸಾರಾಂಶ
ಹುಬ್ಬಳ್ಳಿ:
ನಗರದ ಹು-ಧಾ ಮಹಾನಗರ ಪಾಲಿಕೆ ಕಚೇರಿ ಎದುರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರದಿಂದ ಪೌರ ಕಾರ್ಮಿಕರು ಧರಣಿ ಸತ್ಯಾಗ್ರಹ ಆರಂಭಿಸಿದ್ದು, ಕೈಯಲ್ಲಿ ಪೊರಕೆ ಹಿಡಿದು ಪ್ರತಿಭಟಿಸಿದರು.ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರು ಮತ್ತು ನೌಕರರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ಪೌರ ಕಾರ್ಮಿಕರು ಸರ್ಕಾರ ಹಾಗೂ ಪಾಲಿಕೆ ಆಯುಕ್ತರ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹಾಕಲು ನಿರ್ಧರಿಸಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಕೆಲ ರಾಜಕೀಯ ಮುಖಂಡರು ಪಾಲಿಕೆ ಆಯುಕ್ತರ ಮೇಲೆ ಒತ್ತಡ ಹೇರುವ ಜತೆಗೆ, ಸುಳ್ಳು ಭರವಸೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.ರಾಜ್ಯ ಸರ್ಕಾರ ಆದೇಶ ಹೊರಡಿಸಿ 8 ವರ್ಷ ಕಳೆದರೂ ಈವರೆಗೂ ಪಾಲಿಕೆಯಲ್ಲಿ 134 ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡಿಲ್ಲ. ಅನೇಕ ಅರ್ಹ ಪೌರಕಾರ್ಮಿಕರು ಪಾಲಿಕೆ ಆಯುಕ್ತರ ದಿವ್ಯ ನಿರ್ಲಕ್ಷ್ಯದಿಂದಾಗಿ ಗುತ್ತಿಗೆ ಆಧಾರದಲ್ಲೇ ಇಂದಿಗೂ ಸೇವೆ ಸಲ್ಲಿಸುವಂತಾಗಿದೆ. ಅವರ ಅವಲಂಬಿತ ಕುಟುಂಬಗಳು ಆರ್ಥಿಕ ಸಮಸ್ಯೆಗೆ ಸಿಲುಕಿ ಬೀದಿಗೆ ಬರುವಂತಾಗಿದೆ. ನೂರಾರು ಪೌರ ಕಾರ್ಮಿಕರು ಸೇವಾ ನಿವೃತ್ತಿ ಹೊಂದಿದ್ದರೂ ಅವರಿಗೆ ಪರಿಹಾರ ಒದಗಿಸುವ ಕೆಲಸವನ್ನು ಪಾಲಿಕೆ ಆಯುಕ್ತರು ಹಾಗೂ ಸರ್ಕಾರ ಮಾಡುತ್ತಿಲ್ಲ ಎಂದು ಹರಿಹಾಯ್ದರು.
ಪೌರಕಾರ್ಮಿಕರ ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಆ ನಿಟ್ಟಿನಲ್ಲಿ ಪ್ರತಿಪಕ್ಷದ ಶಾಸಕರು ಅಧಿವೇಶನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಗಾಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಕನಕಪ್ಪ ಕೊಟಬಾಗಿ, ದತ್ತಪ್ಪ ಆಪುಸಪೇಟ್, ಯಲಪ್ಪ ಪಾಳೇದ, ಲಕ್ಷ್ಮೀ ಬೇತಾಪಲ್ಲಿ, ಯಮನವ್ವ ಬೆನಸಮಟ್ಟಿ, ವೆಂಕಟೇಶ ಪಾಲವಾಯಿ, ಭಾಗ್ಯಲಕ್ಷ್ಮೀ ಮಾದರ, ಹೊಳಲಮ್ಮ ಕಡಕೋಳ, ಹುಲಿಗೆಮ್ಮ ಚಿಕ್ಕತುಂಬಳ, ಕಸ್ತೂರಿ ತಮದಡ್ಡಿ, ಲಕ್ಷ್ಮೀ ತುರಿಹಾಳ, ನಾಗರಾಜ ದೊಡ್ಡಮನಿ, ರಾಕೇಶ್ ಚುರಮುರಿ ಸೇರಿದಂತೆ ಹಲವರಿದ್ದರು.