ವಿವಿಧ ಬೇಡಿಕೆ ಈಡೇರಿಕೆಗೆ ಕಟ್ಟಡ ಕಾರ್ಮಿಕರ ಪ್ರತಿಭಟನೆ

| Published : Dec 16 2023, 02:01 AM IST

ವಿವಿಧ ಬೇಡಿಕೆ ಈಡೇರಿಕೆಗೆ ಕಟ್ಟಡ ಕಾರ್ಮಿಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಹಣದಲ್ಲಿ ಶೇ.70ರಿಂದ 90ರಷ್ಟು ಹಣ ಕಡಿತಗೊಳಿಸಿ ಜಾರಿ ಮಾಡಿರುವುದನ್ನು ಖಂಡಿಸಿ ಎಲ್ಲ ವರ್ಗಗಳ ಮಕ್ಕಳಿಗೂ ಈ ಹಿಂದೆ ನೀಡುತ್ತಿದ್ದ ಶೈಕ್ಷಣಿಕ ಧನಸಹಾಯ ಮುಂದುವರಿಸಬೇಕು ಎಂದು ಆಗ್ರಹಿಸಲಾಯಿತು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡುವುದರಲ್ಲಿ ವಿಳಂಬ ಧೋರಣೆ, ಅರ್ಜಿಗಳ ತಿರಸ್ಕಾರ ಮಾಡುತ್ತಿರುವುದನ್ನು ಖಂಡಿಸಿ ಕಟ್ಟಡ ಕಾರ್ಮಿಕರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗದ ತಹಶೀಲ್ದಾರ್ ರವಿಕುಮಾರ್ ಮುಖಾಂತರ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ವಿವಿಧ ಘಟಕಗಳಿಂದ ಮನವಿ ಸಲ್ಲಿಸಲಾಯಿತು.ನಗರದ ಜಿಲ್ಲಾ ಆಡಳಿತ ಭವನದ ಮುಂಭಾಗ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕ, ನಗರ ಘಟಕ, ಬಡಾವಣೆ ಘಟಕಗಳ, ಗ್ರಾಮ ಘಟಕಗಳ ಪದಾಧಿಕಾರಿಗಳು ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದರು.ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೀಡಲಾಗುತ್ತಿರುವ ಮಕ್ಕಳ ಸ್ಕಾಲರ್ ಶಿಪ್, ಮದುವೆ ಸಹಾಯಧನ, ಸಹಜ ಸಾವಿಗೆ ನೀಡುವ ಅಂತ್ಯಕ್ರಿಯೆ ಅನುಗ್ರಹ ರಾಶಿಯ ಸಹಾಯಧನ, ನಿವೃತ್ತ ಕಟ್ಟಡ ನಿರ್ಮಾಣ ಕಾರ್ಮಿಕರ ಮಾಸಾಶನ ಸಕಾಲಕ್ಕೆ ಬಿಡುಗಡೆಯಾಗುತ್ತಿಲ್ಲ. ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಹಣ ಅಪಾರ ಪ್ರಮಾಣದಲ್ಲಿ ಕಡಿತಗೊಳಿಸಿದ್ದಲ್ಲದೆ, ಸಕಾಲಕ್ಕೆ ಬಿಡುಗಡೆಗೊಳಿಸದೇ ಇರುವುದರಿಂದ ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗುತ್ತಿದೆ ಎಂದರು.ಉಳಿದ ಧನಸಹಾಯದ ಸೌಲಭ್ಯಗಳನ್ನು ಪಡೆಯಲು ಪರದಾಡಬೇಕಾಗಿದೆ. ಸಣ್ಣಪುಟ್ಟ ತಪ್ಪುಗಳ ಕಾರಣಗಳನ್ನು ತೋರಿಸಿ ವಿವಿಧ ಸೌಲಭ್ಯಗಳಿಗೆ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದರಿಂದ ನಿಜವಾದ ಕಟ್ಟಡ ಕಾರ್ಮಿಕರು ವಂಚಿತರಾಗುತ್ತಿದ್ದಾರೆ. ಅನೇಕರು ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಗತಿಸುತ್ತವೆ. ಇದಕ್ಕೆ ಸಕಾಲ ಯೋಜನೆಯಡಿ ತಂದು ನಿಗದಿತ ಅವಧಿಯಲ್ಲಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಹಣದಲ್ಲಿ ಶೇ.70ರಿಂದ 90ರಷ್ಟು ಹಣ ಕಡಿತಗೊಳಿಸಿ ಜಾರಿ ಮಾಡಿರುವುದನ್ನು ಖಂಡಿಸಿ ಎಲ್ಲ ವರ್ಗಗಳ ಮಕ್ಕಳಿಗೂ ಈ ಹಿಂದೆ ನೀಡುತ್ತಿದ್ದ ಶೈಕ್ಷಣಿಕ ಧನಸಹಾಯ ಮುಂದುವರಿಸಬೇಕು ಎಂದು ಆಗ್ರಹಿಸಲಾಯಿತು.ಪ್ರತಿಭಟನಾ ಧರಣಿಯಲ್ಲಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಜಿಲ್ಲಾ ಸಂಘಟನಾ ಸಂಚಾಲಯ ತುಕಾರಾಮ್ ಬಿ. ಪಾತ್ರೋಟಿ, ಹಿರಿಯ ಮುಖಂಡರಾದ ಹುಲುಗಪ್ಪ ಅಕ್ಕಿ ರೊಟ್ಟಿ, ತಿಮ್ಮಣ್ಣ ಎ.ಎಲ್, ತಾಲೂಕಾ ಸಂಚಾಲಕರಾದ ನೂರಸಾಬ್ ಹೊಸಮನಿ, ರಾಜಾಸಾಬ್ ತಹಶೀಲ್ದಾರ್, ಶಂಶುದ್ದೀನ್ ಮಕಾಂದಾರ್, ಗಂಗಾವತಿ ತಾಲೂಕು ಕಾರ್ಪೆಂಟರ್ ಯೂನಿಯನ್ ಅಧ್ಯಕ್ಷ ಮೊಹಮ್ಮದ್ ಖಾಸಿಮ್. ಭಾಗ್ಯನಗರದ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ (ಎಐಟಿಯುಸಿ ಸಂಯೋಜಿತದ) ಅಧ್ಯಕ್ಷ ಮೌಲಾಸಾಬ್ ಕಪಾಲಿ, ಅಶೋಕ್ ಭಾವಿಮನಿ, ನಾಗರಾಜ್, ಜಗದೀಶ್ ವಡ್ಡರ್, ಗಿಣಿಗೇರಾ ಗ್ರಾಮ ಘಟಕದ ಅಧ್ಯಕ್ಷ ರಾಜಪ್ಪ ಚೌಹಾಣ್, ಪಾನಿಶಾ ಮಕಾಂದಾರ್, ಶರಣಯ್ಯ ರಾಮಗಿರಿ ಮಠ, ಮೆಹಬೂಬ್ ಅಲಿ ಮಕಾಂದಾರ್, ಯಂಕಣ ಬಡಿಗೇರ್, ಮರ್ದಾನಸಾಬ್ ವಾಲಿಕಾರ್ ಭಾಗವಹಿಸಿದ್ದರು.