ಸಾರಾಂಶ
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಧರಣಿ, ಮನೆ ಮನೆ ಕಸ ಸಂಗ್ರಹಿಸುವ ಕಾರ್ಮಿಕರಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮನೆ ಮನೆ ಕಸ ಸಂಗ್ರಹಿಸುವ ಗುತ್ತಿಗೆ ಪೌರ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಗುರುವಾರ ಪೌರ ಕಾರ್ಮಿಕರ ಗುತ್ತಿಗೆದಾರರ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್. ನಾಗರಾಜ್, ಸತತ ಎರಡು ದಶಕಗಳಿಂದ ನಗರ ವ್ಯಾಪ್ತಿಯಲ್ಲಿ ಪ್ರಾಣದ ಹಂಗು ತೊರೆದು ಕಸ ಸಂಗ್ರಹಿಸುವ ಕಾರ್ಮಿಕರಿಗೆ ಇದುವರೆಗೂ ಯಾವುದೇ ರೀತಿಯಾದ ಸೌಲಭ್ಯಗಳು ಲಭಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ಪಿಎಫ್, ಇಎಸ್‍ಐ ಹಾಗೂ ಬ್ಯಾಂಕ್ ಖಾತೆಯಿಲ್ಲ. ಇವುಗಳನ್ನು ಗಮನಿಸಿದರೆ ಕಾರ್ಮಿಕರ ಅಥವಾ ಜೀತದಾಳುಗಳೇ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಪೌರಾಯುಕ್ತರು ಹಾಗೂ ಜಿಲ್ಲಾಧಿಕಾರಿಳಿಗೆ ಸೌಲಭ್ಯ ಒದಗಿಸಲು ಅನೇಕ ಬಾರಿ ಅರ್ಜಿ ಸಲ್ಲಿಸಿದರೂ ಉತ್ತರ ಸಿಗುತ್ತಿಲ್ಲ ಎಂದು ಹೇಳಿದರು.ಪ್ರತಿದಿನ ಮುಂಜಾನೆ ಗುತ್ತಿಗೆ ಪೌರ ಕಾರ್ಮಿಕರು ಅನೇಕ ರೋಗ ರುಜಿನದಿಂದ ಕೂಡಿರುವ ಕಸಗಳನ್ನು ಸಂಗ್ರಹಿಸಬೇಕು. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ ನಗರಸಭೆ ಆರೋಗ್ಯ ಸೇವೆ ಒದಗಿಸದೇ ಕೇವಲ ವೇತನಕ್ಕಷ್ಟೇ ಸೀಮಿತಗೊಳಿಸಿದ್ದಾರೆ ಎಂದು ತಿಳಿಸಿದರು.
ನಗರವನ್ನು ಅತ್ಯಂತ ಸ್ವಚ್ಛವಾಗಿಡಲು ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಈ ಕೆಲಸದಲ್ಲಿ ಆರೋಗ್ಯದ ಏರುಪೇರುಗಳು ಕಂಡುಬಂದಲ್ಲಿ ಕುಟುಂಬ ದಿಕ್ಕಪಾಲಾಗಲಿದೆ. ಮಕ್ಕಳ ವಿದ್ಯಾಭ್ಯಾಸ, ಬಾಡಿಗೆ ಸೇರಿದಂತೆ ಅನೇಕ ಖರ್ಚುಗಳು ಕಾರ್ಮಿಕರ ಕುಟುಂಬಕ್ಕಿದೆ ಎಂದು ಹೇಳಿದರು.ಹೀಗಾಗಿ ಬೇಡಿಕೆ ಈಡೇರಿಕೆಗೆ ಸಲ್ಲಿಸಿರುವ ಅರ್ಜಿಗಳು ಪದೇ ಪದೇ ವಿಳಂಭವಾಗುತ್ತಿರುವ ಕಾರಣ ಪ್ರತಿಭಟನೆ ಮೂಲಕ ಜಿಲ್ಲಾಡಳಿತ ಹಾಗೂ ಪೌರಾಯುಕ್ತರನ್ನು ಎಚ್ಚರಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ಗುತ್ತಿಗೆ ಪೌರ ಕಾರ್ಮಿಕರಿಗೆ ಶೀಘ್ರವೇ ನೇರ ಪಾವತಿ ಮಾಡಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ಕನಿಷ್ಟ ವೇತನ, ಪಿಎಫ್ ಮತ್ತು ಇಎಸ್‍ಐ ನೀಡಬೇಕು. ರಾಷ್ಟ್ರೀಯ ಬ್ಯಾಂಕ್‍ನಲ್ಲಿ ನೌಕರರಿಗೆ ಖಾತೆ ತೆರೆಯಬೇಕು. ಗುರುತಿನ ಚೀಟಿ ವಿತರಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ತನ್ವೀರ್, ಕಾರ್ಯದರ್ಶಿ ಸಿ.ಟಿ.ಆನಂದ್, ಖಜಾಂಚಿ ಮೋಹನ್, ಸದಸ್ಯರಾದ ಮಹೇಶ್, ಹನುಮಂತಪ್ಪ, ಮುಖಂಡರಾದ ರಾಧಾಕೃಷ್ಣ, ಮರ್ಲೆ ಅಣ್ಣಯ್ಯ, ಹರೀಶ್ ಮಿತ್ರ ಇದ್ದರು.29 ಕೆಸಿಕೆಎಂ 3ಮನೆ ಮನೆ ಕಸ ಸಂಗ್ರಹಿಸುವ ಗುತ್ತಿಗೆ ಪೌರ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಗುರುವಾರ ಪೌರ ಕಾರ್ಮಿಕರ ಗುತ್ತಿಗೆದಾರರ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.