ಸಾರಾಂಶ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ
ಕನ್ನಡಪ್ರಭ ವಾರ್ತೆ ರಾಮನಗರದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ, ಅಗತ್ಯ ಕೌನ್ಸೆಲಿಂಗ್ ನೀಡುವಂತೆ ಜಿಲ್ಲಾಧಿಕಾರಿ ಯಂಶವತ್ ವಿ.ಗುರುಕರ್ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಜಿಲ್ಲಾ ಕೋಶ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಾಲ್ಯ ವಿವಾಹಗಳು ಗ್ರಾಮಗಳಲ್ಲಿ ಗುಪ್ತವಾಗಿ ನಡೆಯುವುದರಿಂದ ಕೆಲವೊಮ್ಮೆ ಅಧಿಕಾರಿಗಳಿಗೆ ಅದು ತಿಳಿಯುವುದು ತಡವಾಗುತ್ತದೆ. ಆ ರೀತಿಯ ಸಂದರ್ಭಗಳು ಎದುರಾಗುವ ಮೊದಲೇ ಶಾಲೆಗಳಲ್ಲಿ ಹೆಚ್ಚು ದಿನ ಗೈರು ಹಾಜರಾದ ಬಾಲಕಿಯರ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರು ಗಮನ ಹರಿಸುತ್ತಿರಬೇಕು. ಒಂದು ವೇಳೆ ಗೈರು ಹಾಜರಾದ ಬಾಲಕಿಯರಿಗೆ ಪೋಷಕರು ವಿವಾಹ ಮಾಡುತ್ತಿರುವ ವಿಷಯ ತಿಳಿದುಬಂದರೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಬೇಕು. ಅಧಿಕಾರಿಗಳು ದೂರು ದಾಖಲಿಸಿಕೊಂಡು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಯಾವುದೇ ಒತ್ತಡಗಳಿಗೆ ಮಣಿಯಬಾರದು ಎಂದು ಹೇಳಿದರು.
ಸಮಾಜದಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸರ್ಕಾರ ನೀಡುವ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಬೇಕು. ಇತರೆ ಸಂಘ ಸಂಸ್ಥೆಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಅವರ ಮುಖಾಂತರ ಯೋಜನೆಗಳನ್ನು ಧಮನಿತ ಮಹಿಳೆಯರಿಗೆ ತಲುಪುವಂತೆ ನೋಡಿಕೊಳ್ಳಬೇಕು.ರಾಮನಗರ ಜಿಲ್ಲೆಯಲ್ಲಿ 181 ಮಹಿಳಾ ಸಹಾಯವಾಣಿಯ ಮೂಲಕ ಏಪ್ರಿಲ್-2024ರಿಂದ ಜುಲೈ-2024ರ ಅಂತ್ಯಕ್ಕೆ 8 ಕರೆಗಳು ಸ್ವೀಕೃತವಾಗಿದ್ದು, ಈ ಪ್ರಕರಣಗಳಿಗೆ ಪೊಲೀಸ್ ನೆರೆವು, ಕಾನೂನು ನೆರವು, ಆಪ್ತ ಸಮಲೋಚನೆ ಸೇವೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಧನಶ್ರೀ ಯೋಜನೆಯಡಿ ಎಚ್.ಐ.ವಿ ಸೋಂಕಿತ ಹಾಗೂ ಬಾಧಿತ ಮಹಿಳೆಯರಿಗೆ ಮಾನಸಿಕವಾಗಿ ಆತ್ಮಸ್ಥೈರ್ಯ ನೀಡಿ ಪ್ರೋತ್ಸಾಹ ಧನ ಸೌಲಭ್ಯ ಸದುಪಯೋಗ ಪಡೆಯುವಂತೆ ತಿಳಿಸಬೇಕು ಜೊತೆಗೆ ಜಿಲ್ಲೆಯಲ್ಲಿ ಚನ್ನಪಟ್ಟಣ ಗೊಂಬೆಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದ್ದು, ಗೊಂಬೆಗಳು ತಯಾರಿಸುವ ಕರಕುಶಲ ತರಬೇತಿಯನ್ನು ನೀಡಿ ಅವರ ಜೀವನ ಸುಧಾರಿಸುವ ಉದ್ಯಮವನ್ನಾಗಿ ಮಾರ್ಪಾಡು ಮಾಡಬಹುದು ಎಂದು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್.ಸವಿತಾ ಮಾತನಾಡಿದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಡಿವೈಎಸ್ಪಿ ದಿನಕರ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ನಿರೀಕ್ಷಕರಾದ ಬಿ.ಗಾಯಿತ್ರಿ ದೇವಿ , ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಜಿನಿ, ಜಿಲ್ಲೆಯ 5 ತಾಲೂಕುಗಳ ಶಿಶು ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.