ನಗರಸಭಾ ಮಾಜಿ ಸದಸ್ಯನ ಸ್ವಾಭಿಮಾನದ ಜೀವನ

| Published : Aug 30 2024, 01:09 AM IST

ಸಾರಾಂಶ

ಜೆಡಿಎಸ್‌ನಿಂದಲೂ ದೂರ ಉಳಿದು ಕಳೆದ ೨೨ ವರ್ಷಗಳಿಂದ ಸ್ವಂತ ದುಡಿಮೆಯಿಂದ ಜೀವನ ಸಾಗಿಸುತ್ತಿದ್ದಾರೆ. ವೆಂಕಟರಾಜು ಅವರಿಗೆ ಈಗ ೭೦ ವರ್ಷ, ಚುನಾವಣಾ ರಾಜಕೀಯದಿಂದ ದೂರ ಉಳಿಯಲು ಮೊದಲೇ ನಿಶ್ಚಯಿಸಿದ್ದರಿಂದ ಬೇರೆ ವಾರ್ಡಿನಿಂದ ಸ್ಪರ್ಧಿಸಲು ಮನಸ್ಸು ಮಾಡಲಿಲ್ಲ, ಹೀಗಾಗಿ ತಮ್ಮ ಹಿರಿಯರು ಮಾಡುತ್ತಿದ್ದ ಫೋಟೋ ವ್ಯಾಪಾರವನ್ನು ಮುನ್ನಡೆಸಲು ತೀರ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಮಾನವನ ಸಹಜ ಬದುಕನ್ನು ಕುರಿತು ದಾಸಶ್ರೇಷ್ಠ ಕನಕದಾಸರು ನೂರಾರು ವರ್ಷಗಳ ಹಿಂದೆ ಹೇಳಿರುವ ಅಮೃತವಾಣಿ ಇಂದಿಗೂ ಪ್ರಸ್ತುತವಾಗಿದೆ, ಹಾಗೆಯೇ ಕೆಲವರು ನ್ಯಾಯವಾಗಿ ದುಡಿದು ಬದುಕಲು ಉತ್ತಮ ದಾರಿ ಇದ್ದರೂ ಮೈಗಳ್ಳತನದಿಂದ ‘ಉದರ ನಿಮಿತ್ತಂ ಬಹುಕೃತ ವೇಷಂ’ ಎಂಬಂತೆ ಹೊಟ್ಟೆಗಾಗಿ ಬಗೆ ಬಗೆಯ ವೇಷ ಧರಿಸುತ್ತಾರೆ, ಆದರೆ,ಇದಕ್ಕೆ ಅಪವಾದ ಎಂಬಂತೆ ಕೋಲಾರ ನಗರದ ಮಾಜಿ ಪುರಪಿತೃ ಒಬ್ಬರು ರಾಜಕೀಯ ನಿವೃತ್ತಿ ಬಳಿಕ ದೇವರ ಪೋಟೋಗಳನ್ನು ಮಾರುತ್ತಾ ಸ್ವಾಭಿಮಾನದ ಜೀವನ ನಡೆಸಿ ಹಲವರಿಗೆ ಮಾದರಿಯಾಗಿದ್ದಾರೆ.

ಅನೇಕ ಹಾಲಿ ಮತ್ತು ಮಾಜಿ ಪುರಪಿತೃಗಳು, ಗ್ರಾಪಂ, ಜಿಪಂ ಸದಸ್ಯರು ಒಂದು ಅವಧಿಗೆ ಆಯ್ಕೆಯಾದರೂ ಸಾಕು, ತಮ್ಮ ಮನೆಯನ್ನು ಅರಮನೆ ಮಾಡಿಕೊಂಡು, ಐಷಾರಾಮಿಯಾಗಿ ಬದುಕಲು ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ ಕೋಲಾರ ನಗರಸಭೆಯ ಸದಸ್ಯರಾಗಿದ್ದ ವೆಂಕಟರಾಜು ಎಂಬುವರು ೨೦೦೨ರಲ್ಲಿ ನಗರಸಭೆಗೆ ವಾರ್ಡ್ ೨೧ರಿಂದ ಆಯ್ಕೆ ಆಗಿ ೫ ವರ್ಷ ಸೇವೆ ಸಲ್ಲಿಸಿದ ಬಳಿಕ ರಾಜಕೀಯಕ್ಕೆ ತಿಲಾಂಜಲಿ ಹೇಳಿ ತಮ್ಮ ಪೂರ್ವಿಕರ ಕುಲವೃತ್ತಿಯಾದ ಫೋಟೋಗಳನ್ನು ಮಾರಿ ಅದರಲ್ಲಿ ಸಿಗುವ ಲಾಭಾಂಶದಿಂದ ಜೀವನ ಸಾಗಿಸುತ್ತಿದ್ದಾರೆ.

ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಬೆಂಬಲಿಗರಾಗಿರುವ ವೆಂಕಟರಾಜು ಕೋಲಾರ ನಗರಸಭೆಯ ಮಾಜಿ ಅಧ್ಯಕ್ಷರಾದ ಗಿರಿಜಮ್ಮ, ರಘುರಾಮ ಅವರ ಕಾಲದಲ್ಲಿ ನಗರಸಭೆ ಸದಸ್ಯರಾಗಿದ್ದರು. ತಮ್ಮ ವಾರ್ಡಿನ ಜನರಿಗೆ ಮೂಲಸೌಕರ್ಯ ಕಲ್ಪಿಸಲು ನಗರಸಭೆಯಲ್ಲಿ ಗುಡುಗುತ್ತಿದ್ದರು, ಅಧಿಕಾರಿಗಳು ಸ್ಪಂದಿಸದಿದ್ದರೆ ನಗರಸಭೆ ಅಧಿವೇಶನದ ಬಾವಿಗೆ ಇಳಿದು ಬೇಡಿಕೆ ಈಡೇರುವ ತನಕ ಹೋರಾಟ ಮಾಡುತ್ತಿದ್ದರು.

ವೆಂಕಟರಾಜು ಮನಸ್ಸು ಮಾಡಿದ್ದರೆ, ೨೧ನೇ ವಾರ್ಡಿನಲ್ಲೋ ಅಥವಾ ಕೋಲಾರ ನಗರದ ಯಾವುದೋ ಒಂದು ಮೂಲೆಯಲ್ಲಿ ಖಾಲಿ ನಿವೇಶನ ಗುರುತಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಬಹುದಿತ್ತು, ಅಕ್ರಮ ಖಾತೆಗಳ ಮೂಲಕ ಹಣ ಮಾಡಬಹುದಿತ್ತು, ಕಾಮಗಾರಿಗಳಲ್ಲಿ ಕಮೀಷನ್ ಪಡೆಯಬಹುದಿತ್ತು, ಅಧಿಕಾರಿಗಳನ್ನು ಬೆದರಿಸಿ ಹಣ ಗಳಿಸಬಹುದಿತ್ತು. ಆದರೆ ತಮ್ಮ ಐದು ವರ್ಷಗಳ ಅವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ಮಾಜಿ ಸದಸ್ಯ ತಮ್ಮ ಅವಧಿ ಮುಗಿದ ಬಳಿಕ ಮತ್ತೆ ನಗರಸಭೆಗೆ ಸ್ಪರ್ಧಿಸಲಿಲ್ಲ.

ಜೊತೆಗೆ ಜೆಡಿಎಸ್‌ನಿಂದಲೂ ದೂರ ಉಳಿದು ಕಳೆದ ೨೨ ವರ್ಷಗಳಿಂದ ಸ್ವಂತ ದುಡಿಮೆಯಿಂದ ಜೀವನ ಸಾಗಿಸುತ್ತಿದ್ದಾರೆ. ವೆಂಕಟರಾಜು ಅವರಿಗೆ ಈಗ ೭೦ ವರ್ಷ, ಚುನಾವಣಾ ರಾಜಕೀಯದಿಂದ ದೂರ ಉಳಿಯಲು ಮೊದಲೇ ನಿಶ್ಚಯಿಸಿದ್ದರಿಂದ ಬೇರೆ ವಾರ್ಡಿನಿಂದ ಸ್ಪರ್ಧಿಸಲು ಮನಸ್ಸು ಮಾಡಲಿಲ್ಲ, ಹೀಗಾಗಿ ತಮ್ಮ ಹಿರಿಯರು ಮಾಡುತ್ತಿದ್ದ ಫೋಟೋ ವ್ಯಾಪಾರವನ್ನು ಮುನ್ನಡೆಸಲು ತೀರ್ಮಾನಿಸಿದರು.

ಸಾಕಷ್ಟು ಪೈಪೋಟಿ ನಡುವೆಯೂ ವೃತ್ತಿಯನ್ನು ಬಿಡಲಿಲ್ಲ, ಕೋಲಾರದ ಅಮ್ಮವಾರಿಪೇಟೆಯಲ್ಲಿ ಫೋಟೋಗಳಿಗೆ ಪ್ರೇಮ್ ಹಾಕಿ ಗ್ರಾಹಕ ಕೊಟ್ಟಷ್ಟು ಹಣ ಪಡೆಯುತ್ತಿದ್ದ ವೆಂಕಟರಾಜು, ಜನನಿಬಿಡ ಪ್ರದೇಶದಲ್ಲಿ ಫೋಟೋ ಪ್ರೇಮ್ ಶಾಪ್ ತೆರೆಯಲು ಇಚ್ಛಿಸಿ ನಾರಾಯಣಿ ಚಿತ್ರಮಂದಿರ ಮುಂಭಾಗದಲ್ಲಿ ಇರುವ ಗಣೇಶನ ಗುಡಿ ಪಕ್ಕದ ಖಾಲಿ ಜಾಗ ನೀಡಲು ನಗರಸಭೆಗೆ ಅರ್ಜಿ ಹಾಕಿದ್ದರು. ಬಹುತೇಕ ಸದಸ್ಯರು ಒಪ್ಪಿಗೆಯನ್ನು ನೀಡಿದ್ದರು. ಆದರೆ ಸದರಿ ಜಾಗವನ್ನು ಸಹಕಾರಿ ಸೊಸೈಟಿಯವರು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಯತ್ನಿಸಿರುವ ವಿಷಯ ಗೊತ್ತಾದ ಮೇಲೆ ಯೋಜನೆ ಕೈಬಿಟ್ಟು ಕಡೆಗೆ ಸಹಕಾರಿ ಸೊಸೈಟಿಯ ಕಟ್ಟಡದ ತಳಪಾಯದಲ್ಲಿನ ಸಣ್ಣ ಜಾಗದಲ್ಲಿ ವೃತ್ತಿಯನ್ನು ಮುಂದುವರೆಸಿದ್ದಾರೆ.

ದಿನಕ್ಕೆ ೩೦೦ರಿಂದ ೫೦೦ ರು. ಗಳಿಕೆ ಆಗುತ್ತದೆ, ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿದ್ದೇನೆ, ನಾನು ನಗರಸಭೆ ಸದಸ್ಯನಾಗಿದ್ದೆ ಎಂಬುದನ್ನು ಈ ಕಾಲದ ಜನ ಮರೆತಿದ್ದಾರೆ, ನನ್ನ ಜೊತೆ ಆಯ್ಕೆಯಾಗಿದ್ದ ಅನೇಕರು ಅಗಲಿದ್ದಾರೆ, ನನ್ನ ಕೆಲಸ ಏನಾದರೂ ಇದ್ದರೆ ಮಾತ್ರ ನಗರಸಭೆಗೆ ಹೋಗುತ್ತೇನೆ, ನಮ್ಮ ಕಾಲದಲ್ಲಿ ಅಧಿಕಾರಿಗಳು ನಗರಸಭೆ ಸದಸ್ಯರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದರು, ಪೌರಾಯುಕ್ತರಾಗಿದ್ದ ಹನುಮಂತಪ್ಪ ಅವರು ಜನರ ಕೆಲಸಕ್ಕಾಗಿ ಅವರ ಬಳಿ ಹೋದರೆ ಸ್ಪಂದಿಸುತ್ತಿದ್ದರು. ಈಗ ನಗರಸಭೆ ಮೇಲೆ ಜನತೆಗೆ ನಂಬಿಕೆ ಇಲ್ಲದಂತಾಗಿದೆ, ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ, ಮಾಜಿ ಸಚಿವ ಶ್ರೀನಿವಾಸಗೌಡರು ಸಹ ಜನಪರವಾಗಿದ್ದರು, ಈಗಿನ ಪರಿಸ್ಥಿತಿ ಕೇಳಿದರೆ ಸಂಕಟವಾಗುತ್ತದೆ ಎಂದು ವೆಂಕಟರಾಜು ‘ಕನ್ನಡಪ್ರಭ’ದೊಂದಿಗೆ ಖೇಧ ವ್ಯಕ್ತಪಡಿಸಿದರು.