ಸಾರಾಂಶ
-ಚಿಕ್ಕಮಗಳೂರಿನ ಮುಖ್ಯ ರಸ್ತೆಯಲ್ಲಿ ಮೆರವಣಿಗೆ, ಆಜಾದ್ ಪಾರ್ಕ್‌ನಲ್ಲಿ ಮಾನವ ಸರಪಳಿ ನಿರ್ಮಾಣ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಲಾರಿ ಚಾಲಕರಿಗೆ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಕಠಿಣ ಶಿಕ್ಷೆ ವಿಧಿಸುವ ಕಾನೂನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಹಾಗೂ ಜಿಲ್ಲಾ ಲಾರಿ ಮಾಲೀಕರ ಸಂಘದ ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸಂಘದ ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಲಾರಿ ಮಾಲೀಕರು ಮತ್ತು ಚಾಲಕರು ಆಜಾದ್ ಪಾರ್ಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಜಿ.ಕೆ.ಶಿವಾನಂದ್, ಕೇಂದ್ರ ಸರ್ಕಾರ ಲಾರಿ ಜಾರಿಗೆ ಮುಂದಾಗಿರುವ ಕಲಂ 106 ಉಪವಿಧಿ 1 ಮತ್ತು 2 ಹಿಟ್ ಆ್ಯಂಡ್ ರನ್ ಹೊಸ ಕಾಯ್ದೆಯಿಂದ ಚಾಲಕರಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ಏಳು ಲಕ್ಷ ರು. ದಂಡ ವಿಧಿಸುವ ಕಾನೂನು ನುಂಗಲಾರದ ತುತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದೊಮ್ಮೆ ಆಕಸ್ಮಿಕವಾಗಿ ಸಂಭವಿಸುವ ಅಪಘಾತಗಳಿಂದ ಸ್ಥಳದಲ್ಲಿ ಚಾಲಕರಿದ್ದರೆ ಸ್ಥಳೀಯರು, ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಚಾಲಕರಿಗೆ ಹಲ್ಲೆಗೆ ಮುಂದಾಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಇಂತಹ ಪ್ರಕರಣಗಳು ಬಹಳಷ್ಟು ನಡೆದಿವೆ. ಜೊತೆಗೆ ಲಕ್ಷಾಂತರ ರು. ದಂಡವನ್ನು ಹೊಂದಿಸುವ ಶಕ್ತಿ ಚಾಲಕರಿಗಿಲ್ಲದಿರುವ ಕಾರಣ ಕಾನೂನನ್ನು ಪರಿಶೀಲಿಸಿ ಹಿಂಪಡೆಯಬೇಕು ಎಂದರು.ಟ್ರೇಡ್ ಯೂನಿಯನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್‌ಶಂಕರ್ ಮಾತನಾಡಿ, ಕೇಂದ್ರದ ಹೊಸ ಕಾನೂನು ಜಾರಿ ಗೊಂಡಲ್ಲಿ ಚಾಲಕರು ಸೇರಿದಂತೆ ಇಡೀ ಕುಟುಂಬವೇ ಬೀದಿಗೆ ಬೀಳುವ ಸ್ಥಿತಿಯಿದೆ. ಪ್ರತಿ ನಿತ್ಯ ಕನಿಷ್ಟ ವೇತನದಲ್ಲಿ ಜೀವನ ನಡೆಸುವವರಿಗೆ ಏಕಾಏಕಿ ಲಕ್ಷಾಂತರ ರು. ದಂಡ ವಿಧಿಸಿದರೆ ಬದುಕಲಾರದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಮುಂದಿನ ಏಪ್ರಿಲ್‌ನಲ್ಲಿ ಹೊಸ ಕಾನೂನು ಜಾರಿಗೊಳಿಸುವ ಮಾಹಿತಿ ಹಿನ್ನೆಲೆಯಲ್ಲಿ ಇಂದು ಲಾರಿ, ಟೆಂಪೋ, ಆಟೋ ಚಾಲಕರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆ ನಡೆಸಲಾಗುತ್ತಿದ್ದು ಒಂದು ವೇಳೆ ಕಾನೂನು ಜಾರಿಗೆ ಮುಂದಾದರೆ ದೇಶದ ಲಕ್ಷಾಂತರ ಮಂದಿ ಚಾಲಕರ ಬದುಕು ದುಸ್ತರವಾಗಲಿರುವ ಕಾರಣ ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಕಾಯ್ದೆ ಹಿಂಪಡೆಯುವಿಕೆ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಟ್ರೇಡ್ ಯೂನಿಯನ್ ಹಾಗೂ ಲಾರಿ ಸಂಘದ ಮುಖಂಡರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಟ್ರೇಡ್ ಯೂನಿಯನ್ ತಾಲೂಕು ಅಧ್ಯಕ್ಷ ವೆಂಕಟೇಶ್, ಖಜಾಂಚಿ ಅಬ್ದುಲ್ ರಫೀಕ್, ಪ್ರಧಾನ ಕಾರ್ಯದರ್ಶಿ ಎಚ್.ಆರ್.ಮಂಜುನಾಥ್, ಲಾರಿ ಸಂಘದ ಉಪಾಧ್ಯಕ್ಷ ಲಾಲುಪಿಂಟೋ, ಖಜಾಂಚಿ ಮುಫೀರ್ ಅಹ್ಮದ್, ನಿರ್ದೇಶಕ ಅಬ್ದುಲ್ ಖನ್ನಿ, ಚಾಲಕರಾದ ಅಹ್ಮದ್ ಬಾಬು, ವೆಂಕಟೇಶ್, ಮುಕುಂದ, ರಮೇಶ್ ಹಾಗೂ ಚಾಲಕರು, ಮಾಲೀಕರು ಹಾಜರಿದ್ದರು. 17 ಕೆಸಿಕೆಎಂ 3ಲಾರಿ ಚಾಲಕರಿಗೆ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಕಠಿಣ ಶಿಕ್ಷೆ ವಿಧಿಸುವ ಕಾನೂನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ಲಾರಿ ಮಾಲೀಕರು ಹಾಗೂ ಚಾಲಕರು ಬುಧವಾರ ಮಾನವ ಸರಪಳಿ ನಿರ್ಮಾಣ ಮಾಡಿ ಪ್ರತಿಭಟನೆ ನಡೆಸಿದರು.