ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ.ಜಾತಿಯವರಿಗೆ ಒಳಮೀಸಲಾತಿ ನೀಡುವಾಗ ಕೆನೆ ಪದರ ಅಳವಡಿಸಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪರಾಮರ್ಶಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪ.ಜಾತಿ ಮತ್ತು ಪ. ಪಂಗಡಗಳ ರೈಲ್ವೆ ನೌಕರರ ಸಂಘದ ಪದಾಧಿಕಾರಿಗಳು ರೈಲು ನಿಲ್ದಾಣದ ಎದುರು ಪ್ರತಿಭಟಿಸಿದರು.ಪ.ಜಾತಿಯವರಿಗೆ ಒಳಮೀಸಲಾತಿ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಆದರೆ, ಕೆನೆಪದರ ನೀತಿ ಅಳವಡಿಸಬೇಕೆಂಬುದು ಸರಿಯಲ್ಲ. ರಾಜ್ಯ ಸೇವೆಗಳಲ್ಲಿ ಪ.ಜಾತಿ ಮತ್ತು ಪ.ಪಂಗಡಗಳ ಪ್ರಾತಿನಿಧ್ಯ ಇನ್ನೂ ಅಗತ್ಯ ಮಟ್ಟ ತಲುಪಿಲ್ಲ. ಆರ್ಥಿಕ ಮಾನದಂಡ ಮತ್ತು ಕೆನೆಪದರ ಅಭ್ಯರ್ಥಿಗಳ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು. ಈಗಲೂ ತುಳಿತಕ್ಕೊಳಗಾದ ಜಾತಿಗಳ ಜನರ ವಿರುದ್ಧದ ತಾರತಮ್ಯದಿಂದ ಅನೇಕ ಸಂಸ್ಥೆಗಳ ಮೀಸಲು ಹುದ್ದೆಗಳು ಖಾಲಿ ಇವೆ ಎಂದರು.
ಕೆನೆ ಪದರ ಪರಿಕಲ್ಪನೆ ಮೀಸಲಾತಿ ಅನುಷ್ಠಾನಕ್ಕೆ ಪ್ರಯೋಜನಕ್ಕಿಂತ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ಇದರಿಂದ ಶತಮಾನದಿಂದ ಆಚರಣೆಯಲ್ಲಿರುವ ಆರ್ಥಿಕ ಅಸಮಾನತೆ, ಸಾಮಾಜಿಕ ತಾರತಮ್ಯ ಸರಿದೂಗುವುದಿಲ್ಲ ಎಂದು ಅವರು ಆರೋಪಿಸಿದರು.ಕೂಡಲೇ ನ್ಯಾಯಾಲಯ ತನ್ನ ತೀರ್ಪನ್ನು ಪರಾಮರ್ಶೆಗೆ ಒಳಪಡಿಸಬೇಕು. ಕೆನೆ ಪದರ ನೀತಿ ಅಳವಡಿಕೆಯನ್ನು ಕೈಬಿಡುವ ಮೂಲಕ ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಲಯ ಅಧ್ಯಕ್ಷ ಕೆ.ಎಸ್. ದ್ಯಾಮಣ್ಣನವರ್, ಕಾರ್ಯದರ್ಶಿ ಎಂ. ಮೋಹನ್ ಮೊದಲಾದವರು ಇದ್ದರು.ಅತ್ಯಾಚಾರ, ದೌರ್ಜನ್ಯ ಖಂಡಿಸಿ ಪ್ರತಿಭಟನೆಕನ್ನಡಪ್ರಭ ವಾರ್ತೆ ಮೈಸೂರುದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆ ಖಂಡಿಸಿ ಟೆರಿಷಿಯನ್ ಕಾಲೇಜು ವಿದ್ಯಾರ್ಥಿನಿಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.ಕಾಲೇಜು ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿ, ಮನವಿ ಸಲ್ಲಿಸಿದರು.ದೇಶದಲ್ಲಿ ಹಾಗೂ ಕರ್ನಾಟದಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಹತ್ಯೆ, ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿವೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಅಲ್ಲದೆ ಸಮಾಜದಲ್ಲಿ ಮಹಿಳೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಮಹಿಳೆಯರ ಕೆಲಸದ ಸ್ಥಳಗಳಲ್ಲಿ ಉತ್ತಮ ಭದ್ರತೆಯ ವಾತಾವರಣೆ ಇಲ್ಲದಂತಾಗಿದೆ ಎಂದು ಅವರು ಕಿಡಿ ಕಾರಿದರು.
ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಸರ್ಕಾರಗಳು ಕಠಿಣ ಕಾನೂನು ಜಾರಿಗೊಳಿಸಿ ಶಿಕ್ಷೆಗೆ ಒಳಪಡಿಸಬೇಕು. ಶೀಘ್ರಗತಿಯ ನ್ಯಾಯಾಲಯ ಸ್ಥಾಪಿಸಿ ಅತ್ಯಾಚಾರಿಗಳಿಗೆ ಶಿಕ್ಷೆ ನೀಡಬೇಕು. ಸಂತ್ರಸ್ತರಿಗೆ ಸರ್ಕಾರಗಳು ಸೂಕ್ತ ರಕ್ಷಣೆಯೊಂದಿಗೆ ಎಲ್ಲಾ ಸೌಲಭ್ಯ ನೀಡಬೇಕು. ಮಹಿಳಾ ಸಮಾನತೆ, ಅತ್ಯಾಚಾರ, ದೌರ್ಜನ್ಯದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ ಅಪರಾಧ ಪ್ರಮಾಣ ಕಡಿಮೆ ಮಾಡಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಸಿ. ಜಯಂತಿ ಸೇರಿದಂತೆ ನೂರಾರು ಮಂದಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.