ಬೇಡಿಕೆ ಈಡೇರಿಸಲು ಆಗ್ರಹಿಸಿ ಪಿಂಚಣಿ ವಂಚಿತ ನೌಕರರ ಪ್ರತಿಭಟನೆ

| Published : Aug 19 2024, 12:50 AM IST

ಬೇಡಿಕೆ ಈಡೇರಿಸಲು ಆಗ್ರಹಿಸಿ ಪಿಂಚಣಿ ವಂಚಿತ ನೌಕರರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

- ಸೆ. 5 ರೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ರಾಜ್ಯ ವ್ಯಾಪಿ ಶಾಲೆ ಕಾಲೇಜು ಬಂದ್‌ ಮಾಡಿ ಪ್ರತಿಭಟನೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಜಿಲ್ಲಾ ಘಟಕದ ನೇತೃತ್ವದಲ್ಲಿ ನೌಕರರು ತಾಲೂಕು ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿ, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪರಸಪ್ಪ ಕೂಸನೂರ, ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಹಾಗೂ ನಿವೃತ್ತಿ ವೇತನ ಸೇರಿದಂತೆ ಸೌಲಭ್ಯಗಳ ನಿಯಂತ್ರಣ ವಿಧೇಯಕ 2014 ಕ್ಕೆ ತಿದ್ದುಪಡಿ ತಂದು ಅಥವಾ ರದ್ದುಪಡಿಸಿ ಭವಿಷ್ಯವರ್ತಿಯಾಗಿ ಜಾರಿಗೆ ಬರುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೆ ತರುವ ಭರವಸೆ ನೀಡಿತ್ತು. ಈ ಕೂಡಲೇ ಓಪಿಎಸ್‌ನ್ನು ಜಾರಿ ಗೊಳಿಸಬೇಕು ಎಂದು ಒತ್ತಾಯಿಸಿದರು.

2006ರ ನಂತರ ಸೇವೆ ಸೇರಿದ ಸರ್ಕಾರಿ ನೌಕರರಿಗೆ ನೀಡಿರುವಂತೆ ಹಳೆ ಡಿಫೈನ್ಸ್ ಪಿಂಚಣಿ ಸೌಲಭ್ಯ ಅನುದಾನಿತ ಸಂಸ್ಥೆಗಳಲ್ಲಿರುವ ಸಮಾನ ಪ್ರಕರಣಗಳಿಗೂ ಸಹ ಅನ್ವಯಿಸಿ ಹಳೆ ನಿಶ್ಚಿತ ಪಿಂಚಣಿ ನೀಡಬೇಕು. ಓಪಿಎಸ್ ವಿಳಂಬವಾದಲ್ಲಿ ಸರ್ಕಾರಿ ನೌಕರರಿಗೆ ನೀಡುವ ರೀತಿ ಯಂತೆ ಎನ್‌ಪಿಎಸ್ ಯೋಜನೆ ಯಥಾವತ್ತಾಗಿ ಅನುದಾನಿತ ನೌಕರರಿಗೂ ನೀಡಬೇಕು ಎಂದರು.ವೈದ್ಯಕೀಯ ಸೌಲಭ್ಯಗಳಾದ ಆರೋಗ್ಯ ಸಂಜೀವಿನಿ ಸೌಲಭ್ಯ ತಾರತಮ್ಯವಿಲ್ಲದೇ ಜಾರಿಗೆ ಮುಂದಾಗಬೇಕು. 2002-20 ರವರೆಗೆ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಮರಣ ನಿವೃತ್ತಿ, ರಾಜೀನಾಮೆ ಮತ್ತು ಇತರ ಕಾರಣಗಳಿಗೆ ಖಾಲಿಯಿರುವ ಶಿಕ್ಷಕ ಹುದ್ದೆಗಳ ಭಡ್ತಿಗೆ ಅನುಮತಿಸಬೇಕು ಎಂದು ಹೇಳಿದರು.ಸರ್ಕಾರಿ ಶಾಲಾ ಕಾಲೇಜುಗಳ ಮತ್ತು ಅನುದಾನಿತ ಶಾಲಾ ಕಾಲೇಜುಗಳ ಮಕ್ಕಳು, ನೌಕರರಿಗೆ ನೀಡುವ ಸೌಲಭ್ಯಗಳಲ್ಲಿ ಯಾವುದೇ ತಾರತಮ್ಯ ಮಾಡದಂತೆ ಸಮಾನವಾಗಿ ಹಂಚಬೇಕು. ಸೆ. 5 ರ ಶಿಕ್ಷಕರ ದಿನಾಚರಣೆ ಒಳಗಾಗಿ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಏಕಕಾಲಕ್ಕೆ ಶಾಲಾ-ಕಾಲೇಜು ಬಂದ್‌ಗೊಳಿಸಿ ರಾಜಧಾನಿಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಸಂಘದ ಗೌರವಾಧ್ಯಕ್ಷ ಎಂ.ಆರ್.ಗಂಗಾಧರ್, ಉಪಾಧ್ಯಕ್ಷ ಕಡೂರು ಭಾರ್ಗವ, ಪ್ರಧಾನ ಕಾರ್ಯದರ್ಶಿ ಕೃಷ್ಣ ಪೂಜಾರಿ, ಮುಖಂಡರಾದ ರಾಧಾಕೃಷ್ಣ, ಶ್ರೀನಿವಾಸ್, ಚಂದ್ರಶೇಖರ್, ಅರುಣ್ ಸಾಗರ್, ಯೋಗೀಶ್, ಹನುಮಂತಪ್ಪ, ಚನ್ನಬಸಪ್ಪ, ರಘು, ಶಿವಕುಮಾರ್ ಇದ್ದರು.

18 ಕೆಸಿಕೆಎಂ 1ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರು ಚಿಕ್ಕಮಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.