ಬೇಡಿಕೆ ಈಡೇರಿಕೆಗೆ ಗ್ರಾಮಾಡಳಿತ ಅಧಿಕಾರಿಗಳ ಪ್ರತಿಭಟನೆ

| Published : Sep 27 2024, 01:20 AM IST

ಬೇಡಿಕೆ ಈಡೇರಿಕೆಗೆ ಗ್ರಾಮಾಡಳಿತ ಅಧಿಕಾರಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಆಡಳಿತಧಿಕಾರಿಗಳ ಸಂಘದಿಂದ ಗುರುವಾರ ಶಹಾಪುರ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಕೆಲಸ ನಿರ್ವಹಿಸಲು ಬೇಕಾಗಿರುವ ಅತ್ಯಗತ್ಯ ಅತ್ಯಾಧುನಿಕ ಸೌಲಭ್ಯ ನೀಡದೆ ಕೆಲಸ ಮಾಡುವಂತೆ ಮೇಲಾಧಿಕಾರಿಗಳು ಒತ್ತಡ ಹೇರುವುದನ್ನು ವಿರೋಧಿಸಿ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಗಾಗಿ ಒತ್ತಾಯಿಸಿ, ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ತಾಲೂಕು ಘಟಕದಿಂದ ಕಪ್ಪುಪಟ್ಟಿ ಧರಿಸಿ ಗುರುವಾರ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಸೆ.30 ರಿಂದ ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಮುಖರು ಮಾತನಾಡಿ, ಜೀವ ಇಲ್ಲದ ಯಂತ್ರಗಳಿಗೆ ವಿಶ್ರಾಂತಿ ಇದೆ. ಆದರೆ, ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಿಗಿಲ್ಲ. ಮೇಲಾಧಿಕಾರಿಗಳ ಪಾಲಿಗೆ ಯಂತ್ರಕ್ಕಿಂತಲೂ ಕಡೆಯಾಗಿದ್ದೇವೆ. ಈ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಮಗೆ ಆರೋಗ್ಯ ತಪಾಸಣೆ ಮಾಡಿದರೆ ಬಹುತೇಕ ನೌಕರರಿಗೆ ಬಿಪಿ, ಶುಗರ್ ಬಂದಿರುವ ಬಗ್ಗೆ ಅನುಮಾನಗಳು ಬರುತ್ತವೆ. ಮಾನಸಿಕ ಒತ್ತಡದಲ್ಲಿ ಕೆಲಸ ನಿರ್ವಹಿಸುವಾಗ ಹೆಚ್ಚು ಕಡಿಮೆಯಾದರೆ ಅದಕ್ಕೆ ನಮ್ಮದೇ ತಲೆ ತಂಡವಾಗುತ್ತದೆ. ಏನಾದರೂ ನಮಗೆ ಹೆಚ್ಚು ಕಡಿಮೆಯಾದರೆ ನಮ್ಮ ಕುಟುಂಬದ ನಿರ್ವಹಣೆ ಗತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೇಯಾಂಕ ಗಳಿಸಬೇಕು ಎನ್ನುವ ಉದ್ದೇಶದಿಂದ ಮೇಲಾಧಿಕಾರಿಗಳು ಒತ್ತಡ ಹಾಕಿ ಬಿಡುವಿಲ್ಲದೆ ದುಡಿಸಿಕೊಳ್ಳುತ್ತಾರೆ. ವಿಚಿತ್ರ ಎಂದರೆ ಕಚೇರಿಗಳಿಗೆ ವೇಳೆ ಮುಗಿದ ಮೇಲೆ ಮೀಟಿಂಗ್ ಮಾಡುವುದು ಅಲ್ಲದೆ ರಜೆ ದಿನದ ಹಿಂದಿನ ದಿನದ ಸಂಜೆ ಮೀಟಿಂಗ್ ಮಾಡಿ, ಇದೆಲ್ಲ ಗೊತ್ತಿಲ್ಲ ನಾಳೆ ಈ ಕೆಲಸ ಪೂರ್ಣಗೊಳಿಸಬೇಕು. ಇಲ್ಲದೆ ಹೋದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎನ್ನುವ ಭಯದಲ್ಲಿ ಕೆಲಸ ನಿರ್ವಹಿಸುವ ಪರಿಸ್ಥಿತಿ ಇದೆ ಎಂದು ಕಂದಾಯ ನೌಕರರ ಅಳಲಾಗಿದೆ.

ರಜೆ ದಿನಗಳಲ್ಲಿ ನಮ್ಮ ವೈಯಕ್ತಿಕ ಕೆಲಸಗಳಿಗೆ ಗಮನ ಕೊಡಲಾಗುತ್ತಿಲ್ಲ. ತಂದೆ-ತಾಯಿ, ಹೆಂಡತಿ, ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯದಂತಾಗಿದೆ. ಇದರಿಂದ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಹಾಳಾಗಿದೆ ಎಂದು ನೋವು ತೋಡಿಕೊಂಡರು.

ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಅಂದಾಜು 17ಕ್ಕೂ ಅಧಿಕ ಮೊಬೈಲ್ ಅಥವಾ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದಾರೆ. ಇದನ್ನು ನಿರ್ವಹಿಸಲು ಬೇಕಾದ ಮೊಬೈಲ್, ಲ್ಯಾಪ್ ಟಾಪ್ ಅತ್ಯಾಧುನಿಕ ಉಪಕರಣ ನೀಡುತ್ತಿಲ್ಲ ಎಂದು ಆಕ್ರೋಶಗೊಂಡರು. ವೃತ್ತಕ್ಕೆ ಒಂದರಂತೆ ಮೊಬೈಲ್, ಲ್ಯಾಪ್‌ಟಾಪ್, ಗೂಗಲ್ ಕ್ರೋಮ್‌ಬುಕ್, ಪ್ರಿಂಟರ್, ಇಂಟರ್‌ನೆಟ್ ಸೌಲಭ್ಯ ನೀಡುವವರೆಗೆ ಕೆಲಸ ಮಾಡುವುದಿಲ್ಲ, ಆಧಾರ್‌ಸೀಡ್, ಲ್ಯಾಂಡ್ ಬೀಟ್, ಬಗರ್‌ಹುಕುಂ, ಹಕ್ಕುಪತ್ರ, ನಮೂನೆ 1-5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆಪ್, ವಿವಿಧ ಮೂಲ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.

ಒಂದು ಗ್ರಾಮ ಪಂಚಾಯ್ತಿ ಹಾಗೂ 304 ಲೋಕಲ್ ಹೋಬಳಿ ವೃತ್ತಗಳನ್ನು ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ರಾಜಸ್ವ ನಿರೀಕ್ಷಕರನ್ನು ಪ್ರಥಮ ದರ್ಜೆ ಸಹಾಯಕರನ್ನಾಗಿ ಮಾಡಿ ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನಾಗಿ ಪರಿಷ್ಕರಿಸಿ ಮೇಲ್ದರ್ಜೆಗೇರಿಸಿ ಪದೋನ್ನತಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಯಾಣ ಭತ್ಯೆ ದರ 500 ರಿಂದ 3000 ರು.ಗಳಿಗೆ ಹೆಚ್ಚಿಸಬೇಕು. ಕೆಲಸದ ಮುಕ್ತಾಯದ ನಂತರ ನಡೆಸಲಾಗುವ ಎಲ್ಲಾ ಬಗೆಯ ವರ್ಚುವಲ್ ಸಭೆಗಳನ್ನು ಕಡ್ಡಾಯ ನಿಷೇಧಿಸಬೇಕು. ಗ್ರಾಮ ಸಹಾಯಕರಿಗೆ ಸೇವಾಭದ್ರತೆ ಒದಗಿಸಬೇಕು, ಬೇಡಿಕೆ ಗಳನ್ನು ಈಡೇರಿಸುವವರೆಗೂ ಸೆ.26 ರಿಂದ ಎಲ್ಲಾ ಬಗೆಯ ಮೊಬೈಲ್ ಆಪ್ ಹಾಗೂ ವೆಬ್ ಅಪ್ಲಿಕೇಷನ್ ಸ್ಥಗಿತ ಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ರಾಜ್ಯವ್ಯಾಪಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸರ್ಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ರಾಯಪ್ಪಗೌಡ ಹುಡೇದ, ಡಿಟಿ ಸಂಗಮೇಶ್, ಸೋಮನಾಥ್, ಕಂದಾಯ ನಿರೀಕ್ಷಕರಾದ ಬಸನಗೌಡ, ಭೀಮ್ ರೆಡ್ಡಿ ಹೊಸಮನಿ, ಮಹೇಂದ್ರ, ಸಂಘದ ತಾಲೂಕಾಧ್ಯಕ್ಷ ವೆಂಕಟೇಶ್ ರಾಠೋಡ, ಕಾರ್ಯದರ್ಶಿ ಶಂಕರಗೌಡ, ರಾಜ್ಯ ಸಮಿತಿ ಸದಸ್ಯ ಗುಂಜಲಪ್ಪ ನಾಯಕ, ಜಿಲ್ಲಾ ಉಪಾಧ್ಯಕ್ಷ ರಮೇಶ್ ರಾಠೋಡ, ಮಹಿಳಾ ಪ್ರತಿನಿಧಿ ಲಕ್ಷ್ಮಿ ಪತ್ತಾರ್ ಸೇರಿದಂತೆ ಇತರರಿದ್ದರು.