ಸಾರಾಂಶ
ಚಾಮರಾಜನಗರದ ಪತ್ರಿಕಾಗೋಷ್ಟಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಚಿತ್ರನಟ ದರ್ಶನ್ ಮತ್ತು ಪವಿತ್ರಗೌಡ ಹಾಗೂ ಸಹಚರರು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದನ್ನು ಖಂಡಿಸಿ ಜೂ.೧೮ರ ಮಂಗಳವಾರ ವೀರಶೈವ ಲಿಂಗಾಯತ ಸಂಘಟನಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ೧೦-೩೦ ಗಂಟೆಗೆ ಸರಿಯಾಗಿ ಶ್ರೀ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನದ ಮುಂಭಾಗ ಆಗಮಿಸಿ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು, ಬಸವ ಬಳಗಗಳು ಹಾಗೂ ಮಹಿಳಾ ಕದಳಿ ವೇದಿಕೆ ಮತ್ತು ಸಮಾಜದ ಮಠಾಧಿಪತಿಗಳು ಹಾಗೂ ಸಮಾಜ ಬಂಧುಗಳು ಭಾಗವಹಿಸಲಿದ್ದಾರೆ ಎಂದರು.ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಗೈದವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಲು ಮಹಾಸಭೆಯು ಹಾಗೂ ವಿವಿಧ ಸಂಘ ಸಂಸ್ಥೆಗಳು ಒತ್ತಾಯಿಸುತ್ತವೆ. ಈ ಕೃತ್ಯ ಎಸಗಿರುವವರು ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ ಎಲ್ಲ ವ್ಯಕ್ತಿಗಳಿಗೆ ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ದರ್ಶನ್ ಅವರನ್ನು ವಜಾ ಮಾಡಬೇಕೆಂದು ಒತ್ತಾಯಿಸುತ್ತದೆ. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೇ, ಆರೋಪಿ ಸ್ಥಾನದಲ್ಲಿರುವವರನ್ನು ರಕ್ಷಿಸದೇ, ಸರ್ಕಾರವು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರದೆ ಮೃತನ ಕುಟುಂಬದ ಜೊತೆ ನಿಲ್ಲುವುದು ಆದ್ಯ ಕರ್ತವ್ಯವಾಗಿದೆ. ಆ ಕುಟುಂಬಕ್ಕೆ ಹೆಚ್ಚಿನ ನೆರವನ್ನು ಶೀಘ್ರದಲ್ಲಿ ನೀಡುವಂತೆ ಸರ್ಕಾರವನ್ನು ಮಹಾಸಭೆ ಒತ್ತಾಯಿಸುತ್ತದೆ ಎಂದರು.
ಮುಖಂಡರಾದ ಕೋಡಿಮೋಳೆ ರಾಜಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಲಿಂಗಾಯತ ಜನಾಂಗವನ್ನು ಗುರಿಯಾಗಿಸಿಕೊಂಡು ಹತ್ಯೆಯಂತಹ ಪ್ರಕರಣಗಳು ಜರುಗುತ್ತಿವೆ. ನೇಹಾ ಹತ್ಯೆ ಬಳಿಕ ರೇಣುಕಾಸ್ವಾಮಿ ಹತ್ಯೆ ಮಾಡಿರುವುದು ಖಂಡನೀಯ. ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ ಹಿಂದಿನ ನಾಲ್ಕು ತಿಂಗಳ ಹಿಂದಿನ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಮಾಡಿ ಅವರ ಬಂಧನಕ್ಕೆ ಮುಂದಾಗಿದ್ದು ಸಮುದಾಯದ ಮೇಲಿನ ದ್ವೇಷವನ್ನು ತೋರಿಸುತ್ತದೆ ಎಂದರು. ಮುಖಂಡ ಆಲೂರು ಮಲ್ಲು ಮಾತನಾಡಿ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ಕಾರ್ಯ ಶ್ಲಾಘನೀಯ. ಹತ್ಯೆಯಾದ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಟಿಯಲ್ಲಿ ಹಂಗಳ ನಂಜಪ್ಪ, ಹೊಸೂರು ನಟೇಶ್, ಡಾ.ಪರಮೇಶ್ವರಪ್ಪ, ಎನ್‌ರಿಚ್ ಮಹದೇವಸ್ವಾಮಿ ಇದ್ದರು.