ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಹೇಮಾವತಿ ಎಡದಂಡೆ 54ನೇ ವಿತರಣಾ ನಾಲೆ ಕಳಪೆ ಕಾಮಗಾರಿ ಮತ್ತು ನೀರಾವರಿ ಇಲಾಖೆಯಲ್ಲಿ ನಡೆಯುತ್ತಿರುವ ಇತರ ಅಕ್ರಮಗಳ ವಿರುದ್ಧ ತಾಲೂಕು ರೈತಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಂಟಿಯಾಗಿ ಆ.12 ರಂದು ಪಟ್ಟಣದ ಹೇಮಾವತಿ ಎಡದಂಡೆ ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿವೆ ಎಂದು ಜಿಲ್ಲಾ ರೈತಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ವಿ.ರಾಜೇಗೌಡ ತಿಳಿಸಿದ್ದಾರೆ.ಪ್ರತಿಭಟನೆ ಕುರಿತು ರೈತಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಈಗಾಗಲೇ ಪಟ್ಟಣದ ಹೇಮಾವತಿ ಎಡದಂಡೆ ನಾಲಾ ವಿಭಾಗ ನಂ.13 ಕಾರ್ಯಪಾಲಕ ಅಭಿಯಂತರರು ಹಾಗೂ ಪಟ್ಟಣ ಪೊಲೀಸರಿಗೆ ಲಿಖಿತ ಮಾಹಿತಿ ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಸಾವಿರಾರು ಎಕರೆ ಪ್ರದೇಶಗಳಿಗೆ ನೀರೊದಗಿಸುವ 54 ನೇ ವಿತರಣಾ ನಾಲೆ ಆಧುನೀಕರಣ ಕಾಮಗಾರಿ ಈ ಭಾಗದ ರೈತ ಹೋರಾಟಗಾರರ ದಶಕಗಳ ಹೋರಾಟದ ಫಲವಾಗಿ ಆರಂಭಗೊಂಡಿದೆ. 55 ಕೋಟಿ ರು. ಗಳ ಈ ಕಾಮಗಾರಿ ನಿಯಮಾನುಸಾರ ನಡೆಯುತ್ತಿಲ್ಲ ಎಂದು ದೂರಿದ್ದಾರೆ.ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಮತ್ತು ಎಂಜಿನಿಯರು ಪರಸ್ಪರ ಶಾಮೀಲಾಗಿ ಕಳಪೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಕಳಪೆ ಕಾಮಗಾರಿ ವಿರುದ್ಧ ಆರಂಭದಲ್ಲಿಯೇ ಎಚ್ಚೆತ್ತುಕೊಂಡಿರುವ ರೈತರು ಗುಣಮಟ್ಟದ ಕಾಮಗಾರಿಗೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿವೆ ಎಂದು ತಿಳಿಸಿದ್ದಾರೆ.
ಸ್ಥಳೀಯನಾಗಿರುವ ಗುತ್ತಿಗೆದಾರ ತಮ್ಮ ಬೆಂಬಲಿಗರ ಮೂಲಕ ರೈತ ಚಳವಳಿಗೆ ಬೆದರಿಕೆ ಹಾಕಿಸುತ್ತಿದ್ದಾನೆ. ನಮ್ಮ ಹೋರಾಟ ಕಾಮಗಾರಿ ವಿರುದ್ಧವಲ್ಲ. ಬದಲಾಗಿ ಗುಣಮಟ್ಟದ ಕಾಮಗಾರಿಗಾಗಿ ಎಂದು ಹೇಳಿದ್ದಾರೆ.ಹೇಮಾವತಿ ಜಲಾಶಯ ತುಂಬಿ ನೀರಾವರಿ ಇಲಾಖೆ ಈಗಾಗಲೇ ತಾಲೂಕಿನ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಮತ್ತು ಹೇಮಗಿರಿ ನಾಲೆಗಳಿಗೆ ಹೇಮಾವತಿ ನದಿಯಿಂದ ನೀರು ಹರಿಸುತ್ತಿದೆ. ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದು ಭತ್ತದ ಒಟ್ಟಲು ಹಾಕುತ್ತಿದ್ದಾರೆ. ನೀರಾವರಿ ಇಲಾಖೆ ಹಣ ಮಂಜೂರಾಗಿದೆ ಎಂದು ಹೇಳಿ ನೀರು ಹರಿಯುತ್ತಿರುವ ನಾಲೆಗಳ ಹೂಳೆತ್ತುವ ಕಾಮಗಾರಿಗೆ ಮುಂದಾಗಿದೆ ಎಂದು ಕಿಡಿಕಾರಿದ್ದಾರೆ.
ಹೂಳೆತ್ತುವ ನೆಪದಲ್ಲಿ ಕಾಲುವೆಗಳಲ್ಲಿ ಹರಿಸುತ್ತಿರುವ ನೀರು ನಿಲ್ಲಿಸುವುದಕ್ಕೆ ರೈತರ ವಿರೋಧವಿದೆ. ಹೂಳೆತ್ತುವ ನೆಪದಲ್ಲಿ ಸರ್ಕಾರಿ ಹಣ ದೋಚಲು ಮುಂದಾಗಿದ್ದಾರೆ. ಕೂಡಲೇ ಕಾಮಗಾರಿಗೆ ಮಂಜೂರಾಗಿರುವ ಹಣವನ್ನು ಮೀಸಲಿಟ್ಟು ಬೇಸಿಗೆ ಕಾಲದಲ್ಲಿ ನಾಲೆಗಳ ಹೂಳೆತ್ತುವಂತೆ ಸೂಚಿಸಿದ್ದಾರೆ.